ಮಂಗಳೂರು: ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಅರೆಸ್ಟ್ ಮಾಡಿದ್ದು, ಈ ವೇಳೆ ಮತ್ತೋರ್ವ ಪರಾರಿಯಾಗಿದ್ದಾನೆ.
ಬಂಧಿತನನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸುಂಕದಕಟ್ಟೆ ಪುರುಷಂಕೋಡಿ ನಿವಾಸಿ ಮೊಯಿದ್ದೀನ್ ಎಂಬವರ ಪುತ್ರ ಮುಹಮ್ಮದ್ ರಾಝಿಕ್ ಎಂದು ಗುರುತಿಸಲಾಗಿದೆ. ಪರಾರಿಯಾದ ಕಾಸರಗೋಡು ಮಂಜೇಶ್ವರ ಮೊರತ್ತಣೆ ನಿವಾಸಿ ಅಸ್ಗರ್ ಎಂಬಾತನ ಪತ್ತೆಗೆ ಉಳ್ಳಾಲ ಪೊಲೀಸರು ಬಲೆ ಬೀಸಿದ್ದಾರೆ.
ಸೋಮವಾರ ಬೆಳಗ್ಗಿನ ಜಾವ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ಇಬ್ಬರು ಯುವಕರು ಯಮಹಾ R15 ಬೈಕ್’ನಲ್ಲಿ ತಲಪಾಡಿಯಿಂದ ತಚ್ಚಣಿ ಕಡೆಗೆ ಗಾಂಜಾ ತುಂಬಿರುವ ಗೋಣಿ ಚೀಲದ ಸಮೇತ ಬೈಕ್’ನಲ್ಲಿ ಹೋಗುತ್ತಿದ್ದರು. ಈ ವೇಳೆ ಉಳ್ಳಾಲ ಪೊಲೀಸರು ಬೈಕ್ ಅಡ್ಡಗಟ್ಟಿದ್ದಾರೆ. ಆಗ ಮುಹಮ್ಮದ್ ರಾಝೀಕ್ ಪೊಲೀಸರಿಗೆ ಸಿಕ್ಕಿದ್ದು, ಆತನಿಂದ 40 ಸಾವಿರ ರೂ. ಮೌಲ್ಯದ 4 ಕೆ.ಜಿ ಗಾಂಜಾ ಹಾಗೂ ಒಂದು ಬೈಕ್ ಸೇರಿದಂತೆ 1,00,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳ ವಿರುದ್ಧ ಈ ಹಿಂದೆ ಮಂಜೇಶ್ವರ, ಕಾಸರಗೋಡು, ಕುಂಬ್ಳೆ ಠಾಣಾ ವ್ಯಾಪ್ತಿಗಳಲ್ಲಿ ಕೊಲೆಯತ್ನ, ಗಾಂಜಾ ಮಾರಾಟದಂತಹ ಹಲವಾರು ಪ್ರಕರಣಗಳು ದಾಖಾಲಾಗಿರುವುದು ತನಿಖೆಯಿಂದ ತಿಳಿದುಬಂದಿದೆ.
ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಸಂದೀಪ್ ಅವರ ಮಾರ್ಗದರ್ಶನದಲ್ಲಿ PSI ಗಳಾದ ರೇವಣಸಿದ್ದಪ್ಪ, ಪ್ರದೀಪ್ ಟಿ,ಆರ್, ಶಿವಕುಮಾರ್ ಹಾಗೂ ಸಿಬ್ಬಂದಿ ರಂಜಿತ್, ಉದಯ, ಅಶೋಕ, ಅಕ್ಬರ್, ಸಾಗರ, ವಾಸುದೇವ, ಸತೀಶ್, ಚಿದಾನಂದ ಮುಂತಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.