ಶಸ್ತ್ರಾಸ್ತ್ರಗಳ ನೆರವು ಕೋರಿ ನ್ಯಾಟೊ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ಮನವಿ

Prasthutha|

ಕೀವ್: ಯುದ್ಧಪೀಡಿತ ಉಕ್ರೇನ್‍ ನಲ್ಲಿ ಜನರ ಸಾವನ್ನು ತಡೆಯುವ ನಿಟ್ಟಿನಲ್ಲಿ ದೇಶಕ್ಕೆ ಶಸ್ತ್ರಾಸ್ತ್ರದ ನೆರವು ನೀಡಿ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನ್ಯಾಟೊ ದೇಶಗಳಿಗೆ ಮನವಿ ಸಲ್ಲಿಸಿದ್ದಾರೆ.

- Advertisement -

ಪಾಶ್ಚಿಮಾತ್ಯ ದೇಶಗಳ ಒಕ್ಕೂಟ ಇದಕ್ಕೆ ಸ್ಪಂದಿಸಿ ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿದ್ದು, ಸೇನಾ ನೆರವಿನ ಆಶ್ವಾಸನೆ ನೀಡಿದೆ. ರಷ್ಯಾವನ್ನು ಅಂತರರಾಷ್ಟ್ರೀಯ ಜಿ20 ಕೂಟದಿಂದ ಉಚ್ಚಾಟಿಸುವ ಬಗ್ಗೆ ಕೂಡಾ ನ್ಯಾಟೊ ಶೃಂಗ ಸಭೆಯಲ್ಲಿ ಚರ್ಚೆ ನಡೆದಿದೆ.

ಯುದ್ಧ ಇದೀಗ ಇಡೀ ಉಕ್ರೇನ್‍ ದೇಶವನ್ನು ವ್ಯಾಪಿಸಿದ್ದು, ಉಕ್ರೇನ್‍ನ ದಕ್ಷಿಣ ನಗರವಾದ ಮರಿಯೊಪೋಲ್‍ನಲ್ಲಿ ರಷ್ಯಾದ ಬೃಹತ್ ಯುದ್ಧಟ್ಯಾಂಕರ್ ಗಳು ಸದ್ದು ಮಾಡುತ್ತಿರುವ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿವೆ.

- Advertisement -

ಈ ಮಧ್ಯೆ ವಿಡಿಯೊ ಲಿಂಕ್ ಮೂಲಕ  ನ್ಯಾಟೊ ಸಮಿತಿ ಮತ್ತು ಜಿ7 ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್ಸ್ಕಿ,”ರಷ್ಯನ್ ದಾಳಿಯಿಂದ, ಉಕ್ರೇನಿಯನ್ನರ ಸಾವು ತಡೆಯಲು ನಮಗೆ ಅಗತ್ಯವಿರುವ ಎಲ್ಲ ಶಸ್ತ್ರಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳು ಪೂರೈಸಬೇಕು” ಎಂದು ಆಗ್ರಹಿಸಿದರು.

ತೀವ್ರ ರಾಜತಾಂತ್ರಿಕ ನಡೆಗಳನ್ನು ಆರಂಭಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ , ಪಾಶ್ಚಿಮಾತ್ಯ ಒಕ್ಕೂಟವು ಉಕ್ರೇನ್ ಅಹವಾಲನ್ನು ಆಲಿಸುತ್ತಿದ್ದು, ನ್ಯಾಟೊ ಹಿಂದೆಂದಿಗಿಂತಲೂ ಒಗ್ಗಟ್ಟಾಗಿದೆ ಎಂದು ಹೇಳಿದ್ದಾರೆ.

ಇದೀಗ ಝೆಲೆಸ್ಕಿಯವರ ಹೇಳಿಕೆ ಬಳಿಕ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಯುದ್ಧದಲ್ಲಿ ಬಳಸುವ ಸಾಧ್ಯತೆ ಅಧಿಕವಾಗಿದೆ ಎಂದು ಕೇಳಿಬರುತ್ತಿದೆ. ರಷ್ಯಾ ಇವುಗಳನ್ನು ಬಳಸಿದರೆ ನಾವು ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸುತ್ತೇವೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ.



Join Whatsapp