ರಾಜಕಾರಣದಲ್ಲಿ ಚಪ್ಪಲಿ ಎಸೆಯೋರು, ಜಯಕಾರ ಹಾಕೋರು ಇರ್ತಾರೆ
ಬೆಂಗಳೂರು: ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಸಲೀಂ ಅವರ ನಡುವಿನ ಖಾಸಗಿ ಸಂಭಾಷಣೆಗೂ ನನಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಶಿಸ್ತು ಪಾಲನಾ ಸಮಿತಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ನಡೆದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಕೆಲವು ಆಂತರಿಕ ಸಂಭಾಷಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ರೆಹಮಾನ್ ಖಾನ್ ನೇತೃತ್ವದ ಶಿಸ್ತು ಪಾಲನಾ ಸಮಿತಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ. ಅವರ ಹೇಳಿಕೆಗೂ ನನಗೂ ಅಥವಾ ಕಾಂಗ್ರೆಸ್ ಗೂ ಸಂಬಂಧ ಇಲ್ಲ, ನಾನು ಯಾವುದೇ ಪರ್ಸೆಂಟೇಜ್ ವಿಷಯದಲ್ಲಿ ಭಾಗಿಯಾಗಿಲ್ಲ, ಭಾಗಿಯಾಗಬೇಕಾದ ಅವಶ್ಯಕತೆಯೂ ನನಗಿಲ್ಲ ಎಂದು ತಿಳಿಸಿದ್ದಾರೆ.
ಮಾಧ್ಯಮ ಮಾಡಿದ್ದನ್ನು ತಪ್ಪು ಎಂದು ನಾನು ಹೇಳಲ್ಲ. ನಾವು ಮಾತನಾಡಿದ್ದನ್ನು ಮಾಧ್ಯಮಗಳು ತೋರಿಸಿವೆ. ಈ ಹಿಂದೆ ಬಿಜೆಪಿಯ ಅನಂತಕುಮಾರ್, ಯಡಿಯೂರಪ್ಪ ಮಾತನಾಡಿದ್ದರು. ಬಸನಗೌಡ ಪಾಟೀಲ್ ಯತ್ನಾಳ್, ಎಚ್.ವಿಶ್ವನಾಥ್ ಸೇರಿದಂತೆ ಅನೇಕರು ಮಾತನಾಡಿದ್ದಾರೆ. ಅದನ್ನು ಮಾಧ್ಯಮಗಳು ತೋರಿಸಿವೆ ಎಂದರು.
ಸಲೀಂ ಅವರ ಆರೋಪಕ್ಕೂ ನನಗೂ ಸಂಬಂಧ ಇಲ್ಲ. ರಾಜಕಾರಣದಲ್ಲಿ ಚಪ್ಪಾಳೆ ತಟ್ಟುವವರು, ಕಲ್ಲು ಹೊಡೆಯುವವರು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಧಿಕ್ಕಾರ ಕೂಗುವವರು, ಜೈಕಾರ ಹಾಕುವವರು ಇರುತ್ತಾರೆ. ನನ್ನ ಕುರಿತು ಮಾತನಾಡಿರುವವರು ಯಾವ ವರ್ಗಕ್ಕೆ ಸೇರಿದವರು ಎಂದು ಜನರೇ ತೀರ್ಮಾನಿಸಲಿ ಎಂದರು.
ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಸಿದ್ದರಾಮಯ್ಯ ಅವರು ಮತ್ತು ನನ್ನ ನಡುವೆ ಯಾವುದೇ ಜಗಳ ಇಲ್ಲ. ನಿನ್ನೆ ಹೇಳಿಕೆ ಕೊಟ್ಟವರ ವಿರುದ್ಧ ಕಾಂಗ್ರೆಸ್ ಪಕ್ಷದ ಸಂವಿಧಾನ ಆಧರಿಸಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಿದೆ ಎಂದರು. ನಾನು ಯಾವ ಪರ್ಸೇಂಟೆಜ್ ವ್ಯವಹಾರದಲ್ಲೂ ಭಾಗಿಯಾಗಿಲ್ಲ. ಗೃಹ ಸಚಿವರು ದೂರು ಕೊಟ್ಟರೆ ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಅವರೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಇವತ್ತು ವಿದ್ಯುತ್ ಕೊರತೆ ವಿಚಾರ ಮಾತನಾಡಬೇಕು ಎಂದಿದ್ದೆ. ಆದರೆ ಈ ಘಟನೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಅದಕ್ಕಾಗಿಯೇ ಇಲ್ಲಿ ಮಾತನಾಡಲು ಕುಳಿತಿದ್ದೇನೆ ಎಂದರು. ಇನ್ನೂ ಮುಂದೆ ಈ ವಿಚಾರವಾಗಿ ಪಕ್ಷದಲ್ಲಿ ಯಾರು ಚರ್ಚೆ ನಡೆಸಬಾರದು ಎಂದು ಸೂಚನೆ ನೀಡಿದರು.