ಏಕಕಾಲದಲ್ಲಿ ಎರಡು ಪದವಿ ಕೋರ್ಸ್ ಓದಲು ಅವಕಾಶ: ಯುಜಿಸಿ

Prasthutha|

ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪೂರ್ಣಾವಧಿ ಪದವಿ ಕೋರ್ಸ್‌ಗಳನ್ನು ಓದಲು ಅನುಕೂಲವಾಗುವ ಹೊಸ ನೀತಿಗೆ ವಿಶ್ವವಿದ್ಯಾಲಯ ಧನ ಸಹಾಯ ಅಯೋಗ (ಯುಜಿಸಿ) ಮಾರ್ಗಸೂಚಿ ಪ್ರಕಟಿಸಿದೆ. ವಿದ್ಯಾರ್ಥಿಯೋರ್ವ, ಒಂದು ಪೂರ್ಣಾವಧಿ ಪದವಿ ಕೋರ್ಸ್ ಓದುವ ಅವಧಿಯಲ್ಲೇ, ಆನ್ಲೈನ್ ಮೂಲಕ ಅಥವಾ ಡಿಪ್ಲೊಮಾ ಪದವಿ ಪಡೆಯಲು ಅವಕಾಶ ಸಿಗಲಿದೆ.

- Advertisement -

ಪದವಿ ವ್ಯಾಸಂಗ ಮಾಡುತ್ತಿರುವವರು ಜೊತೆ ಜೊತೆಗೆ ಡಿಪ್ಲೊಮಾ ಕೋರ್ಸ್ ಮಾಡಬಹುದು. ಎರಡು ಪದವಿ ಕೋರ್ಸ್‌ಗಳು ಅಥವಾ ಎರಡು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಓದಬಹುದು. ಅಥವಾ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಒಟ್ಟಿಗೆ ಮಾಡಬಹುದು. ಎಂಫಿಲ್, ಪಿಎಚ್‌ಡಿ ಕೋರ್ಸ್‌ಗಳಿಗೆ ಇದು ಅನ್ವಯ ಆಗುವುದಿಲ್ಲ. ಗಮನಿಸಬೇಕಾದ ಅಂಶವೆಂದರೆ, ಏಕಕಾಲದಲ್ಲಿ ಎರಡು ಪೂರ್ಣಾವಧಿ ಕೋರ್ಸ್‌ಗಳನ್ನು ಮಾತ್ರ ಓದಲು ಅವಕಾಶ ಇದೆ. ಮೂರು ಕೋರ್ಸ್ ಮಾಡಲು ಆಗುವುದಿಲ್ಲ. ಹಾಗೆಯೇ, ಎರಡು ಕೋರ್ಸ್‌ಗಳ ಸಮಯ ಭಿನ್ನವಾಗಿರಬೇಕು.

ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ ಕೇವಲ ಒಂದು ಕೌಶಲ್ಯದ ಕಲಿಕೆಗೆ ಸೀಮಿತವಾಗದೇ ಹಲವು ಕೋರ್ಸ್‌ಗಳನ್ನು ಏಕಕಾಲದಲ್ಲಿ ಕಲಿಯಲು ಅವಕಾಶ ಕೊಡಬೇಕೆಂಬ ನೂತನ ಶಿಕ್ಷಣ ನೀತಿ ಎನ್ಇಪಿ 2020 ಆಶಯಕ್ಕೆ ಅನುಗುಣವಾಗಿ ಈ ಸುಧಾರಣಾ ಕ್ರಮವನ್ನು ಯುಜಿಸಿ ತೆಗೆದುಕೊಂಡಿದೆ ಎಂದು ಅಧ್ಯಕ್ಷ ಮಾಮಿದಾಳ ಜಗದೀಶ್ ಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿಗಳು ಏಕಕಾಲದಲ್ಲಿ ಭೌತಿಕ ತರಗತಿಗಳಿರುವ ಎರಡು ಪೂರ್ಣಾವಧಿ ಕೋರ್ಸ್‌ಗಳನ್ನ ಮಾಡಬಹುದು. ಅಥವಾ ಒಂದು ಭೌತಿಕ ತರಗತಿ ಇರುವ ಪೂರ್ಣಾವಧಿ ಕೋರ್ಸ್ ಜೊತೆಗೆ ಆನ್ಲೈನ್ ಅಥವಾ ಕರೆಸ್ಪಾಂಡೆನ್ಸ್ ಮೂಲಕ ಎರಡನೇ ಕೋರ್ಸ್ ಮಾಡಬಹುದು. ಅಥವಾ ಆನ್‌ಲೈನ್‌ನಲ್ಲಿ ಏಕಕಾಲದಲ್ಲಿ ಎರಡು ಡಿಗ್ರಿಗಳನ್ನು ಓದಬಹುದು. ಈ ಹೊಸ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳುವುದು ಬಿಡುವುದು ಆಯಾ ವಿಶ್ವವಿದ್ಯಾಲಯಗಳಿಗೆ ಬಿಟ್ಟಿದ್ದು, ಕಡ್ಡಾಯವಲ್ಲ ಎಂದು ಯುಜಿಸಿ ಹೇಳಿದೆ.



Join Whatsapp