ಸಾಲ ತೀರಿಸದ್ದಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಜಪ್ತಿ ಮಾಡಿದ ಬ್ಯಾಂಕ್!

Prasthutha|

ಬೀಜಿಂಗ್: 2015ರಲ್ಲಿ ತನ್ನ ಎಕ್ಸ್’ಪೋರ್ಟ್ ಬ್ಯಾಂಕ್ ನಿಂದ ಸಾಲ ಪಡೆದು ತೀರಿಸದ ಉಗಾಂಡಾಗೆ ಚೀನಾ ದೊಡ್ಡ ಹೊಡೆತವೊಂದನ್ನು ನೀಡಿದೆ.

- Advertisement -

ಪೂರ್ವ ಆಫ್ರಿಕಾ ಖಂಡದ ದೇಶ ಉಗಾಂಡಾಗೆ ಚೀನಾದ ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ 2015ರಲ್ಲಿ 1,553 ಕೋಟಿ ರೂ. (207 ಮಿಲಿಯನ್ ಡಾಲರ್) ಸಾಲ ನೀಡಿತ್ತು. ಅದನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಈಗ ಬ್ಯಾಂಕ್, ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ಉಗಾಂಡಾದ ಎಂಟೆಬೆ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶೇ.2ರ ಬಡ್ಡಿದರದಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆಯಲಾಗಿತ್ತು. ನಂತರ ಏಳು ವರ್ಷಗಳ ಹೆಚ್ಚುವರಿ ಅವಧಿಯನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಸಾಲ ಮರುಪಾವತಿಗೆ ಸಂಬಂಧಿಸಿದ ನಿಯಮಗಳ ಪಾಲನೆ ಮತ್ತು ಚೀನಾ ನಿಬಂಧನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಉಗಾಂಡದ ಏಕೈಕ ವಿಮಾನ ನಿಲ್ದಾಣವನ್ನು ಚೀನಾ ಬ್ಯಾಂಕ್ ವಶಪಡಿಸಿಕೊಂಡಿದೆ.

- Advertisement -

ಉಗಾಂಡಾ ಅಧ್ಯಕ್ಷ ಯೊವೇರಿ ಮುಸ್ವೇನಿ ಅವರು ಉನ್ನತಮಟ್ಟದ ನಿಯೋಗವನ್ನು ಬೀಜಿಂಗ್ ಗೆ ಕಳುಹಿಸಿಕೊಟ್ಟಿದ್ದು, ಚೀನಾ ಜತೆಗೆ ಮಾತುಕತೆ ನಡೆಸಿ ವಿಮಾನ ನಿಲ್ದಾಣ ಬಿಡಿಸಿಕೊಳ್ಳುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸಾಲದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿರುವ ಬಗ್ಗೆ ಅಲ್ಲಿನ ಸಚಿವರೂ ಕೂಡ ಉಗಾಂಡಾ ಸಂಸತ್ ನ ಕ್ಷಮೆಯನ್ನು ಕೇಳಿದ್ದಾರೆ.



Join Whatsapp