ಯುಇಎಫ್ಎ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಎಂಟರಘಟ್ಟದ ಪಂದ್ಯಗಳು ಮುಕ್ತಾಯವಾಗಿದ್ದು, ಸೆಮಿಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಫೈನಲಿಸ್ಟ್ ಮ್ಯಾಂಚೆಸ್ಟರ್ ಸಿಟಿ, ಬಲಿಷ್ಠ ರಿಯಲ್ ಮ್ಯಾಡ್ರಿಡ್ ತಂಡದ ಸವಾಲನ್ನು ಎದುರಿಸಲಿದೆ. ಎರಡನೇ ಸೆಮಿಪೈನಲ್‌ನಲ್ಲಿ ಲಿವರ್‌ಪೂಲ್ –ವಿಲ್ಲಾರೆಲ್ ತಂಡಗಳು ಮುಖಾಮುಖಿಯಾಗಲಿವೆ.
2 ಪಂದ್ಯಗಳಲ್ಲಿ 1 ಗೋಲು ಗಳಿಸಿ ಗೆದ್ದ ಮ್ಯಾಂಚೆಸ್ಟರ್ ಸಿಟಿ
ಅಥ್ಲೆಟಿಕೊ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್ ಸಿಟಿ ನಡುವಿನ ಕ್ವಾರ್ಟರ್‌ಫೈನಲ್‌ನ ದ್ವಿತೀಯ ಚರಣದ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿದೆ. ವಂದ ಮೆಟ್ರೋಪಾಲಿಟನ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಖಾತೆ ತೆರೆಯಲು ವಿಫಲವಾದವು. ಅದರೆ ಕ್ವಾರ್ಟರ್‌ಫೈನಲ್‌ನ ಮೊದಲ ಚರಣದಲ್ಲಿ ಇಂಗ್ಲೆಂಡ್‌ನ ಚಾಂಪಿಯನ್ ತಂಡ ಮ್ಯಾಂಚೆಸ್ಟರ್ ಸಿಟಿ ಒಂದು ಗೋಲು ದಾಖಲಿಸಿತ್ತು. 70ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಕವಿನ್ ಡಿ ಬ್ರೂನೆ ಗಳಿಸಿದ ಏಕೈಕ ಗೋಲು, ಇದೀಗ ತಂಡವನ್ನು ಸೆಮಿಫೈನಲ್ ಹಂತಕ್ಕೆ ಕರೆದೊಯ್ದಿದೆ.
ಹಾಲಿ ಚಾಂಪಿಯನ್ ಚೆಲ್ಸಿ ಹೋರಾಟ ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯ
ಚಾಂಪಿಯನ್ಸ್ ಲೀಗ್‌ನ ಹಾಲಿ ಚಾಂಪಿಯನ್ ಚೆಲ್ಸಿ ತಂಡ, ಈ ಬಾರಿ ಕ್ವಾರ್ಟರ್‌ಫೈನಲ್ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿದೆ. ಸ್ಯಾಂಟಿಯಾಗೋ ಬರ್ನೆಬ್ಯೂ ಮೈದಾನದಲ್ಲಿ ನಡೆದ ದ್ವಿತೀಯ ಚರಣದಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧ 3-2 ಅಂತರದಲ್ಲಿ ಗೆದ್ದರೂ, ಸರಾಸರಿ ಗೋಲು (5-4) ಗಳಿಕೆಯ ಆಧಾರದಲ್ಲಿ ಸೆಮಿಫೈನಲ್ ಹಂತಕ್ಕೇರಲು ವಿಫಲವಾಯಿತು. ನಿಗದಿತ ಅವಧಿಯಲ್ಲಿ 2-2 ಗೋಲುಗಳಿಂದ ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಆದರೆ ಹೆಚ್ಚುವರಿ ಅವಧಿಯ 96ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಕರೀಂ ಬೆಂಝೆಮಾ, ರಿಯಲ್ ಮ್ಯಾಡ್ರಿಡ್ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದರು.
ತವರು ಮೈದಾನ ಸ್ಟ್ಯಾನ್‌ಫೋರ್ಡ್‌ನಲ್ಲಿ ನಡೆದಿದ್ದ ಮೊದಲ ಚರಣದಲ್ಲಿ ಚೆಲ್ಸಿ 1-3 ಗೋಲುಗಳ ಅಂತರದಲ್ಲಿ ರಿಯಲ್ ಮ್ಯಾಡ್ರಿಡ್‌ಗೆ ಶರಣಾಗಿತ್ತು. ಈ ಪಂದ್ಯದಲ್ಲಿ ಕರೀಂ ಬೆಂಝೆಮಾ ಹ್ಯಾಟ್ರಿಕ್ ಗೋಲು ದಾಖಲಿಸಿ ಮಿಂಚು ಹರಿಸಿದ್ದರು.
ಬೆಯಾರ್ನ್‌ಗೆ ವಿಲ್ಲಾರೆಲ್ ಆಘಾತ
ಎಂಟರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಬೆಯಾರ್ನ್ ಮ್ಯೂನಿಚ್ ತಂಡಕ್ಕೆ ಆಘಾತ ನೀಡಿದ ವಿಲ್ಲಾರೆಲ್ 2006ರ ಬಳಿಕ ಮೊದಲ ಬಾರಿ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದೆ. ಮ್ಯೂನಿಚ್‌ನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು 1–1ರಿಂದ ಸಮಬಲ ಸಾಧಿಸಿದವು. ಆದರೆ ಮೊದಲ ಲೆಗ್‌ನಲ್ಲಿ ವಿಲ್ಲಾರೆಲ್ ಏಕೈಕ ಗೋಲಿನಿಂದ ಗೆದ್ದಿತ್ತು. ಹೀಗಾಗಿ 2–1ರ ಸರಾಸರಿಯಲ್ಲಿ ವಿಲ್ಲಾರೆಲ್ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯಿತು.
ಬೆನ್ಫಿಕಾ ಸವಾಲನ್ನು ಮೆಟ್ಟಿನಿಂತ ಲಿವರ್‌ಪೂಲ್
ಚಾಂಪಿಯನ್ಸ್ ಲೀಗ್‌ನ ಎಂಟರ ಘಟ್ಟದ ಬೆನ್ಫಿಕಾ – ಲಿವರ್‌ಪೂಲ್ ತಂಡಗಳ ನಡುವಿನ ಪಂದ್ಯದಲ್ಲಿ ಲಿವರ್‌ಪೂಲ್ ಕೈ ಮೇಲಾಗಿದೆ. ಮೊದಲ ಲೆಗ್‌ನಲ್ಲಿ 1-3 ಅಂತರದಲ್ಲಿ ಲಿವರ್‌ಪೂಲ್‌ಗೆ ಶರಣಾಗಿದ್ದ ಬೆನ್ಫಿಕಾ, ಎರಡನೇ ಲೆಗ್‌ನಲ್ಲಿ ತೀವ್ರ ಪೈಪೋಟಿ ನೀಡಿ 3 ಗೋಲು ಗಳಿಸಿತಾದರೂ, ಪಂದ್ಯ ಡ್ರಾದಲ್ಲಿ ಮುಕ್ತಾಯವಾಗಿತ್ತು. ಆದರೆ ಹೀಗಾಗಿ ಸರಾಸರಿ ಗೋಲು ಗಳಿಕೆಯ (6-4) ಆಧಾರದಲ್ಲಿ ಲಿವರ್‌ಪೂಲ್ ಸೆಮಿ ಪ್ರವೇಶ ಪಡೆದಿದೆ.