ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್: ಕೋಟ ಠಾಣೆಯಿಂದ ಎಸ್ಐ ಸಹಿತ 6 ಪೊಲೀಸರ ಸ್ಥಳಾಂತರ

Prasthutha|

ಉಡುಪಿ: ಕೊರಗ ಸಮುದಾಯದ ಕಾಲನಿಯೊಂದರಲ್ಲಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ಲಾಠಿಚಾರ್ಜ್ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೋಟ  ಠಾಣೆಯ ಎಸ್ಐ ಸಂತೋಷ್ ಸಹಿತ ಆರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಕೋಟ ಠಾಣೆಯಿಂದ ಕರ್ತವ್ಯದಿಂದ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ತಿಳಿಸಿದ್ದಾರೆ.

- Advertisement -

ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರಗ ಸಮುದಾಯದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಪಿಎಸ್ ಐ ಹಾಗೂ ಸಿಬ್ಬಂದಿಗಳನ್ನು ತನಿಖೆ ನಡೆಸುವ ಸಲುವಾಗಿ ಸ್ಥಳಾಂತರ ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿಗಳು ಕೋಟ ಠಾಣೆಯಲ್ಲಿ ಸೇವೆಯಲ್ಲಿ ಇರುವುದಿಲ್ಲ. ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ನಾಳೆ ಸಂಜೆಯ ಒಳಗಾಗಿ ವರದಿ ನೀಡುವಂತೆ ಉಡುಪಿ ವಿಭಾಗ ಡಿವೈಎಸ್’ಪಿ ಸುಧಾಕರ್ ಅವರಿಗೆ ಸೂಚನೆ ನೀಡಿದ್ದು, ತನಿಖೆಯ ವರದಿ ಬಂದ ಬಳಿಕ  ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಬ್ರಹ್ಮಾವರ ತಾಲೂಕು ಕೋಟತಟ್ಟು ಬಾರಿಕೆರೆಯ ಕೊರಗ ಕಾಲನಿಯಲ್ಲಿ ಸೋಮವಾರ ರಾತ್ರಿ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಅಲ್ಲಿ ಧ್ವನಿವರ್ಧಕ, DJ ಸೌಂಡ್ಸ್ ಹಾಕಿದ ಪರಿಣಾಮ ಸಾರ್ವಜನಿಕರಿಗೆ ತೊಂದರೆ ಆಗಿ ದೂರು ಬಂದ ಹಿನ್ನೆಲೆಯಲ್ಲಿ  ಕೋಟ ಠಾಣೆಯ  ಎಸ್ಎಚ್ಒ ಸ್ಥಳಕ್ಕೆ ತೆರಳಿ 10 ಗಂಟೆ ಆಗಿದೆ ಎಂದು ಬಂದ್ ಮಾಡುವಂತೆ ಸೂಚನೆ ನೀಡಿದ್ದರು. ಆದರೂ  ಸ್ವಲ್ಪ ಸಮಯದ ಬಳಿಕ ಅವಧಿ ಮೀರಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಕೋಟ ಪಿಎಸ್ಐ ಅವರಿಗೆ  ಸ್ಥಳೀಯರು ಮಾಹಿತಿ ನೀಡಿದ ಮೇರೆಗೆ ಪಿಎಸ್ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದ ವೇಳೆ ಕಾರ್ಯಕ್ರಮದಲ್ಲಿ ಸೇರಿದ್ದವರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯಾಗಿದೆ. ಈ ವೇಳೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ನಡೆಸಿದ್ದು, ಹಲವು ಮಂದಿ ಗಾಯಗೊಂಡಿದ್ದರು. ಪೊಲೀಸರ ಅಕ್ರಮದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.



Join Whatsapp