‘ಉಡುಪಿ ಕೇದಾರ ಕಜೆ’ ಅಕ್ಕಿ ಡಿ.23ರಂದು ಬಿಡುಗಡೆ

Prasthutha|

ಬೆಳಗಾವಿ: ಉಡುಪಿಯಲ್ಲಿ ರೈತರು ಪಾಳು ಬಿಟ್ಟಿದ್ದ ಸಾವಿರಾರು ಎಕರೆ ಪ್ರದೇಶವನ್ನು ಕೇದಾರೋತ್ಥಾನ ಟ್ರಸ್ಟ್ ಪಡೆದುಕೊಂಡು 4 ಕೋಟಿ ರೂ.ವೆಚ್ಚ ಮಾಡಿ ಗದ್ದೆ ರೂಪಿಸಿ ಸಾವಯವ ಕುಚ್ಚಲಕ್ಕಿ ಬೆಳೆದಿದೆ. 850 ಟನ್ ಕುಚ್ಚಲಕ್ಕಿ ಸಿಕ್ಕಿದ್ದು, ಇದನ್ನು ಡಿ.23ರಂದು “ಉಡುಪಿ ಕೇದಾರ ಕಜೆ’ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕೇದಾರ ಕಜೆ ಕುಚ್ಚಲಕ್ಕಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಲಿದ್ದಾರೆ. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿರುವ 19 ಪಂಚಾಯಿತಿ, 35 ನಗರ ಸಭೆ ಸದಸ್ಯರು ಒಟ್ಟಿಗೆ ಸೇರಿ ಈ ಕೇದಾರೋತ್ಥಾನ ಟ್ರಸ್ಟ್ ರೂಪಿಸಿದ್ದೇವೆ. ಕೇದಾರೋತ್ಥಾನ ಟ್ರಸ್ಟ್ ಉಡುಪಿ ಶಾಸಕರು ಇದರ ಅಧ್ಯಕ್ಷರಾಗಿರುತ್ತಾರೆ.

ಅಲ್ಲದೆ, ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಎಂದು ರೂಪಿಸಲಾಗಿದ್ದು, ಇದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಚಾಲನೆ ನೀಡಲಿದ್ದಾರೆ. 1500 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಮುಂದಿನ ವರ್ಷ ಈ ಭೂಮಿಯನ್ನು ರೈತರಿಗೆ ಹಿಂದಿರುಗಿಸಿ ನೀಡಲಿದ್ದೇವೆ. ಆನಂತರ ಅವರು ಬೆಳೆಯುವ ಭತ್ತವನ್ನು ನಾವೇ ಖರೀದಿಸಿ ಮಾರಾಟ ಮಾಡುತ್ತೇವೆ ಎಂದರು.
ಇದು ಸಾವಯವ ಅಕ್ಕಿ ಆಗಿರುವುದರಿಂದ ಕೆ.ಜಿ.ಗೆ 60 ರೂ. ದರ ನಿಗದಿ ಪಡಿಸಿದ್ದೇವೆ. ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ನಲ್ಲೂ ದೊರೆಯಲಿದೆ. ಇದು ಪಾಲಿಷ್ ರಹಿತವಾಗಿದೆ ಎಂದು ತಿಳಿಸಿದರು.

Join Whatsapp