ಉಡುಪಿ: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿ ಪ್ರವೀಣ್ ಚೌಗಲೆ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 11 ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಆರೋಪಿ ಪ್ರವೀಣ್ ಅರುಣ್ ಚೌಗಲೆ, ಹಸೀನಾ (46), ಅಫ್ನಾನ್ (23), ಐನಾಜ್ (21) ಮತ್ತು ಅಸೀಮ್ (12) ಎಂಬುವವರನ್ನು ಉಡುಪಿ ನಗರ ಸಮೀಪದ ನೇಜಾರುವಿನ ಅವರ ನಿವಾಸದಲ್ಲಿ ಹತ್ಯೆ ಮಾಡಿದ್ದನು. ಆತನನ್ನು ನವೆಂಬರ್ 16ರಂದು ಸ್ಥಳ ಮಹಜರು ಮಾಡಲು ನೇಜಾರಿಗೆ ಕರೆದೊಯ್ದಿದ್ದರು. ಈ ವೇಳೆ, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆರೋಪಿ ಮೇಲೆ ಹಲ್ಲೆಗೆ ಮುಂದಾಗಿದ್ದರು. ಕೋಪಗೊಂಡಿದ್ದ ಜನರನ್ನು ಹಿಮ್ಮೆಟ್ಟಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು.
ಪೊಲೀಸರು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆರೋಪಿ ಮೇಲೆ ಹಲ್ಲೆಗೆ ಯತ್ನಿಸಿದ 11 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದರಿಂದಾಗಿ, ನೇಜಾರು ಗ್ರಾಮಸ್ಥರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆತಂಕಕ್ಕೀಡಾಗಿದ್ದಾರೆ ಎಂದು ವರದಿಯಾಗಿದೆ.