ಉಡುಪಿ: ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಹಿಜಾಬ್ ಧರಿಸಿದ ಕಾರಣಕ್ಕೆ ತರಗತಿಯಿಂದ ಹೊರ ಹಾಕಿರುವ ಪ್ರಾಂಶುಪಾಲರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಮ್ಮ ನೆಲದಲ್ಲಿ ಇಂತಹ ನಿಯಮಗಳಿಲ್ಲ. ಯಾರನ್ನೋ ಖುಷಿ ಪಡಿಸಲು ಹೋದ ಕಾಲೇಜಿನ ಪ್ರಾಂಶುಪಾಲರ ವರ್ತನೆ ಸಮಾಜಕ್ಕೆ ಕೆಟ್ಟ ಸಂದೇಶ ಬೀರುವ ರೀತಿಯಲ್ಲಿದೆ. ಇದು ನಿಜಕ್ಕೂ ಖಂಡನೀಯ. ಶಾಂತಿಗೆ ಸಂದೇಶ ನೀಡುವ ಉಡುಪಿಯಲ್ಲಿ ಇಂತಹ ಘಟನೆ ಬಹಳ ನೋವು ತಂದಿದೆ. ಇದು ವಿದ್ಯಾರ್ಥಿಗಳ ಮೇಲೆ ನಕರಾತ್ಮಕ ಪರಿಣಾಮ ಬೀರುವಂತದ್ದಾಗಿದ್ದು. ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಪ್ರಿನ್ಸಿಪಲ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಾಂತಿ, ಸೌಹಾರ್ದತೆಯ ಪಾಠ ಮಾಡಬೇಕಾದ ಗುರುಗಳೇ ಇಲ್ಲಿ ಧರ್ಮಗಳ ನಡುವೆ ಕಂದಕ ಸೃಷ್ಟಿಯಾಗುವಂತೆ ವರ್ತಿಸಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಅವರಲ್ಲಿ ಯಾವುದೇ ಧಾರ್ಮಿಕ ಭೇಧ ಭಾವ ಇರುವುದಿಲ್ಲ ಎಂದು ಹೇಳಿದರು.