ಉಡುಪಿ: ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2023ರ ಜುಲೈ ತಿಂಗಳಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ 20ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಬೈಂದೂರು ನಿವಾಸಿ ಮಧುಕರ ಮರಾಠಿ (24) ಶಿಕ್ಷೆಗೆ ಗುರಿಯಾದ ಅಪರಾಧಿ. ಸಂತ್ರಸ್ತ ಬಾಲಕಿ ಅಪರಾಧಿಯ ಸಂಬಂಧಿಕನಾಗಿದ್ದು, ತನ್ನ ಮನೆಗೆ ಬಂದ ಬಾಲಕಿಯನ್ನು ಮಧುಕರ ಮರಾಠಿ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ವಿಚಾರ ಬೇರೆಯವರಲ್ಲಿ ಹೇಳಿದರೆ ನಿನ್ನ ಬಗ್ಗೆ ಅಪ್ರಚಾರ ಮಾಡುವುದಾಗಿ ಆತ ಬಾಲಕಿಗೆ ಬೆದರಿಕೆಯೊಡ್ಡಿದ್ದನು. ಅನಂತರವೂ ಮಧುಕರ, ಯಾರು ಇಲ್ಲದ ಸಮಯ ಆಕೆಯ ಮನೆಗೆ ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಈ ವಿಚಾರ ಯಾರಲ್ಲಿಯೂ ಹೇಳದಂತೆ ಬೆದರಿಕೆಯೊಡ್ಡಿದ್ದನು ಎಂದು ಎಂದು ಸಂತ್ರಸ್ತ ಕುಟುಂಬ ಪೊಲೀಸ್ ದೂರು ನೀಡಿತ್ತು.
ಲೈಂಗಿಕ ದೌರ್ಜನ್ಯದ ಅನಂತರ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಮನೆಯವರು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಆಕೆ ಗರ್ಭವತಿಯಾಗಿರುವ ಬಗ್ಗೆ ತಿಳಿದುಬಂದಿತ್ತು.
ಈ ಬಗ್ಗೆ ವೈದ್ಯರು ಪೊಲೀಸ್ ಠಾಣೆಗೆ ಸೂಕ್ತ ಕ್ರಮಕ್ಕಾಗಿ ಮಾಹಿತಿ ನೀಡಿದ್ದರು. ಅದರಂತೆ ವಿಚಾರ ತಿಳಿದುಕೊಂಡ ಬಾಲಕಿಯ ತಾಯಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತೃ ತೇಜ್ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯ ಒಟ್ಟು 30 ಸಾಕ್ಷಿಗಳ ಪೈಕಿ 15 ಸಾಕ್ಷಿಗಳ ವಿಚಾರಣೆ ನಡೆಸಿದೆ. ಸಂತ್ರಸ್ತ ಬಾಲಕಿಯ ಸಾಕ್ಷಿ ಮತ್ತು ಡಿಎನ್ಎ ವರದಿಯಲ್ಲಿ ಆರೋಪಿ ನೊಂದ ಬಾಲಕಿಯ ಗರ್ಭಕ್ಕೆ ಕಾರಣವಾಗಿರುವ ಪೂರಕ ಸಾಕ್ಷಿ ಯನ್ನು ಪರಿಗಣಿಸಿದ ನ್ಯಾಯಾಲಯ, ಮಧುಕರ ಮರಾಠಿ ಅಪರಾಧಿ ಎಂದು ಸಾಬೀತಾಗಿದೆ ಎಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.