ಮುಂಬೈ: ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಶಿಕ್ಷೆ ನೀಡಬೇಕಿರುವ ಸರ್ಕಾರವೇ ಇದೀಗ ಆರೋಪಿಗಳ ಪರವಾಗಿ ನಿಂತಿರುವುದು ವಿಷಾದಕರ ವಿಚಾರ ಎಂದು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಹೇಳಿದ್ದಾರೆ.
ಬದ್ಲಾಪುರ ಘಟನೆ ಕುರಿತು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು, ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರ ಜೊತೆಗೇ ನಿಂತಿದೆ. ಇದು ನಿಜಕ್ಕೂ ವಿಷಾದಕರ ಸಂಗತಿ. ಹೀಗಾಗಿ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಇದೇ ವೇಳೆ ಬಂದ್ ಕರೆಗೆ ಬಾಂಬೆ ಹೈಕೋರ್ಟ್ ನಿರ್ಬಂಧ ವಿಧಿಸಿರುವ ಕುರಿತು ಮಾತನಾಡಿ, ಬಂದ್ ಬದಲಿಗೆ ಪಕ್ಷದ ಕಾರ್ಯಕರ್ತರು ‘ಬೆಹನ್ ಸುರಕ್ಷಿತ್ ತರ್ ಘರ್ ಸುರಕ್ಷಿತ್’ (ಸಹೋದರಿಯರು ಸುರಕ್ಷಿತವಾಗಿದ್ದರೆ ಮನೆ ಸುರಕ್ಷಿತ) ಎಂಬ ಘೋಷಣೆಯೊಂದಿಗೆ ಸಹಿ ಅಭಿಯಾನ ಆರಂಭಿಸುವಂತೆ ಕರೆ ನೀಡಿದರು. ಸಹಿ ಅಭಿಯಾನ ಪೂರ್ಣಗೊಂಡ ಬಳಿಕ ಇದನ್ನು ಬಾಂಬೆ ಹೈಕೋರ್ಟ್ಗೆ ಪ್ರಸ್ತುತಪಡಿಸಲಾಗುತ್ತದೆ ಎಂದು ತಿಳಿಸಿದರು.