ಮುಂಬೈ: ಕ್ಯಾಬ್ ವಿಳಂಬದಿಂದಾಗಿ ವಿಮಾನಯಾನ ತಪ್ಪಿಸಿಕೊಂಡ ಮುಂಬೈನ ವಕೀಲೆಯೊಬ್ಬರಿಗೆ 20,000 ರೂಪಾಯಿ ಪಾವತಿಸುವಂತೆ ಆನ್ಲೈನ್ ಟ್ಯಾಕ್ಸಿ ಸೇವೆ ಒದಗಿಸುವ ಉಬರ್ ಇಂಡಿಯಾಗೆ ಮಹಾರಾಷ್ಟ್ರದ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಇತ್ತೀಚೆಗೆ ಸೂಚಿಸಿದೆ.
ದೂರುದಾರರಿಗೆ ನೀಡಿದ ದೋಷಪೂರಿತ ಸೇವೆಗೆ ಉಬರ್ ನೇರಹೊಣೆ ಎಂದು ಥಾಣೆಯಲ್ಲಿರುವ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಿಳಿಸಿದೆ. ಉಬರ್ ಚಾಲಕನ ನಿರ್ಲಕ್ಷ್ಯ ಮತ್ತು ಅಸಡ್ಡೆ ವರ್ತನೆಯಿಂದ ವಿಮಾನ ನಿಲ್ದಾಣ ತಲುಪಲು ವಿಳಂಬವಾಗಿದೆ ವಕೀಲೆ ಕವಿತಾ ಶರ್ಮಾ ಆರೋಪಿಸಿದ್ದು, ಆಯೋಗವು ₹ 10,000 ನಷ್ಟ ಪರಿಹಾರ ಮತ್ತು ₹ 10,000 ದಾವೆ ವೆಚ್ಚ ನೀಡುವಂತೆ ಉಬರ್ ಗೆ ನಿರ್ದೇಶಿಸಿದೆ.
ಕವಿತಾ ಅವರು 2018 ರಲ್ಲಿ ಪ್ರಮುಖ ಸಭೆಯೊಂದರಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ಚೆನ್ನೈಗೆ ಪ್ರಯಾಣಿಸಬೇಕಾಗಿತ್ತು. ನಗರದ ದೊಂಬಿವಿಲಿಯಲ್ಲಿರುವ ತನ್ನ ಮನೆಯಿಂದ 36 ಕಿಲೋಮೀಟರ್ ದೂರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಅವರು ಕ್ಯಾಬ್ ಒಂದನ್ನು ಬುಕ್ ಮಾಡಿದ್ದರು.
ಚಾಲಕ ಉಂಟು ಮಾಡಿದ ವಿಳಂಬದಿಂದಾಗಿ ಆಕೆ ವಿಮಾನ ಏರುವುದು ಸಾಧ್ಯವಾಗಲಿಲ್ಲ. ಕ್ಯಾಬ್ ಬುಕ್ ಮಾಡಿದ 14 ನಿಮಿಷಗಳ ಬಳಿಕ ಚಾಲಕ ಪಿಕಪ್ ಸ್ಥಳಕ್ಕೆ ಬಂದಿದ್ದ. ಜೊತೆಗೆ ಕಾರಿಗೆ ಅನಿಲ ತುಂಬಿಸಲು ತಲುಪಬೇಕಿದ್ದ ಹಾದಿಗೆ ವಿರುದ್ಧ ದಿಕ್ಕಿನಲ್ಲಿ ಸಾಗಿ ಇನ್ನಷ್ಟು ವಿಳಂಬ ಮಾಡಿದ. ಹೆಚ್ಚುವರಿ ಪಯಣದಿಂದಾಗಿ ದರ ವ್ಯತ್ಯಾಸವೂ ಆಗಿತ್ತು. ಚಾಲಕನ ಕಡೆಯಿಂದ ತಪ್ಪಾಗಿದೆ ಎಂದು ಅರಿತ ಉಬರ್ ಆಕೆ ಪಾವತಿಸಿದ್ದ 139ರೂ ಹಣವನ್ನು ಮರಳಿಸಿತ್ತು. ಆದರೆ ಆಕೆ ಆ ಮೊತ್ತಕ್ಕೆ ತೃಪ್ತರಾಗದೆ ಗ್ರಾಹಕ ವೇದಿಕೆಯ ಕದ ತಟ್ಟಿದ್ದು, ಆ ಮೂಲಕ ಪರಿಹಾರ ಪಡೆದುಕೊಂಡಿದ್ದಾರೆ.