ವಿದ್ಯಾರ್ಥಿ ನಾಯಕ ಅತೀಕುರ್ರಹ್ಮಾನ್ ಗೆ ತೀವ್ರ ಅನಾರೋಗ್ಯ: ಜೈಲಿನಿಂದ ಆಗ್ರಾದ ಆಸ್ಪತ್ರೆಗೆ ದಾಖಲು

Prasthutha|

ಆಗ್ರಾ: ಹತ್ರಾಸ್ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದಾಗ ಯು.ಪಿ.ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಅತೀಕುರ್ರಹ್ಮಾನ್ ಅವರ ಹದಗೆಟ್ಟ ಆರೋಗ್ಯ ಸಮಸ್ಯೆಯಿಂದಾಗಿ, ಅವರನ್ನು ನಿನ್ನೆ ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯ ನಂತರ ಆಕೆಯ ಕುಟುಂಬಕ್ಕೆ ಸಾಂತ್ವನ ಹೇಳಲು ಅತೀಕುರ್ರಹ್ಮಾನ್ ಮತ್ತು ತಂಡ ತೆರಳಿತ್ತು. ಆದರೆ ಮಾರ್ಗ ಮಧ್ಯೆ ಅವರನ್ನು ತಡೆದ ಯು,ಪಿ. ಪೊಲೀಸರು ಯುಎಪಿಎ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದರು. ಹತ್ರಾಸ್ ನಲ್ಲಿ ಕೋಮು ಗಲಭೆಗೆ ಸಂಚು, ಕಾನೂನು ಸುವ್ಯವಸ್ಥೆ ಹಾಳುಗೆಡವಲು ಸಂಚು ಸೇರಿದಂತೆ ಹಲವಾರು ಆರೋಪದಡಿಯಲ್ಲಿ ಉ.ಪ್ರ ಪೊಲೀಸರು ಪ್ರಕರಣ ದಾಖಲಿಸಿದ್ದರು.

- Advertisement -

ಪ್ರಕರಣಕ್ಕೆ ಸಂಬಂಧಿಸಿದಂತೆ ಉ.ಪ್ರ ಪೊಲೀಸರು ಅತೀಕ್ ಜೊತೆ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಸೇರಿದಂತೆ ಇತರ ಏಳು ಮಂದಿಯನ್ನು ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (ಯುಎಪಿಎ) ಒಳಗೊಂಡಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪಿ.ಎಂ.ಎಲ್.ಎ. ಪ್ರಕರಣಕ್ಕೆ ಸಂಬಂಧಿಸಿದಂತೆ ಅತೀಕುರ್ರಹ್ಮಾನ್ ಅವರು ಮಥುರಾದಿಂದ ಲಕ್ನೋ ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ತಕ್ಷಣ ಅವರನ್ನು ಆಗ್ರಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ರಹ್ಮಾನ್ ಅವರ ಕುಟುಂಬ ಅವರ ಮೇಲ್ವಿಚಾರಣೆಗಾಗಿ ಲಕ್ನೋದ ಕಡೆಗೆ ಪ್ರಯಾಣ ಬೆಳೆಸಿದೆ ಎಂದು ವಕೀಲರಾದ ಮಧುವನ್ ದತ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕೋಶಾಧಿಕಾರಿಯಾಗಿರುವ ಅತೀಕುರ್ರಹ್ಮಾನ್ ಹೃದ್ರೋಗಿಯಾಗಿದ್ದು, ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗುವ ಮೊದಲೇ ಪೊಲೀಸರು ಬಂಧಿಸಿದ್ದರು.

ಘಟನೆಯ ಕುರಿತು ಮಾಧ್ಯಮಕ್ಕೆ ರಹ್ಮಾನ್ ಸಹೋದರ ಮತೀನ್ ಆತನ ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿಯೇ ಸಾಯುವ ಸಾಧ್ಯತೆಯಿದೆ. ಮಾತ್ರವಲ್ಲ ಜೈಲು ಅಧಿಕಾರಿಗಳು ರಹ್ಮಾನ್ ಅವರಿಗೆ ಸೂಕ್ತ ಚಿಕಿತ್ಸೆಗೆ ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -