ಆಸ್ಟೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಸಾಧನೆ ದಾಖಲಾಗಿದೆ. ಗೀಲಾಂಗ್‌ನ ಸೈಮಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಯುಎಇ ತಂಡದ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮಿಂಚಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡ ಉತ್ತಮ ಆರಂಭ ಪಡೆದಿತ್ತು. 14 ಓವರ್ ಕಳೆಯುವಷ್ಟರಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, 15ನೇ ಓವರ್‌ನಲ್ಲಿ ದಾಳಿಗಿಳಿದ ಕಾರ್ತಿಕ್ ಲಂಕನ್ನರ ಯೋಜನೆ ತಲೆಕೆಳಗಾಗಿಸಿದರು. ಮೊದಲ ಮೂರು ಎಸೆತಗಳಲ್ಲಿ 3 ರನ್ ಬಿಟ್ಟುಕೊಟ್ಟ ಅವರು, ನಂತರದ ಮೂರು ಎಸೆತಗಳಲ್ಲಿ ಕ್ರಮವಾಗಿ ಭಾನುಕ ರಾಜಪಕ್ಸ (5), ಚರಿತ್ ಅಸಲಂಕ (0) ಮತ್ತು ನಾಯಕ ದಾಸುನ್ ಶನಕ (0) ವಿಕೆಟ್ ಕಿತ್ತರು. ಆ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಂಪಾದಿಸಿದ ಮೊದಲ ಬೌಲರ್ ಎನಿಸಿದರು. ಇದರಿಂದಾಗಿ ಕೊನೆಯ ಆರು ಓವರ್‌ಗಳಲ್ಲಿ ಲಂಕಾ ರನ್ ಗಳಿಕೆಗೆ ಕಡಿವಾಣ ಬಿತ್ತು. 6 ವಿಕೆಟ್‌ಗಳನ್ನು ಕಳೆದುಕೊಂಡು 38 ರನ್‌ಗಳನ್ನಷ್ಟೇ ಗಳಿಸಲು ಲಂಕನ್ನರಿಗೆ ಸಾಧ್ಯವಾಯಿತು. ಆರಂಭಿಕ ಬ್ಯಾಟರ್ ಪಾಥುಮ್ ನಿಶಾಂಕ 60 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 74 ರನ್ ಗಳಿಸಿದರು.
ಅಂತಿಮವಾಗಿ ದಾಸುನ್ ಶನಕ ಬಳಗ, ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 152 ರನ್ ಕಲೆಹಾಕಿತ್ತು.
ಆದರೆ ಸವಾಲಿನ ಗುರಿ ಬೆನ್ನತ್ತಿದ ಯುಎಇ, 17. 1 ಓವರ್‌ಗಳಲ್ಲಿ ಕೇವಲ 73 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಇದು ಟಿ20 ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ತಂಡವೊಂದು ಗಳಿಸಿದ ಕನಿಷ್ಠ ಮೊತ್ತವಾಗಿ ದಾಖಲಾಯಿತು.
ವನಿಂದು ಹಸರಂಗ ಡಿ ಸಿಲ್ವ ಮತ್ತು ದುಷ್ಮಂತ ಚಮೀರ ತಲಾ ಮೂರು ವಿಕೆಟ್ ಪಡೆದರೆ, ಮಹೇಶ್ ತೀಕ್ಷಣ 2 ಹಾಗೂ ಚಾಮಿಕಾ ಕರುಣಾರತ್ನೆ ಒಂದು ವಿಕೆಟ್ ಪಡೆದರು.
ಮೊದಲ ಪಂದ್ಯದಲ್ಲಿ ನಮೀಬಿಯಾ ತಂಡಕ್ಕೆ ಶರಣಾಗಿದ್ದ ಶ್ರೀಲಂಕಾ, ಬುಧವಾರ ನಡೆಯುವ ಪಂದ್ಯದಲ್ಲಿ ನೆದರ್ಲ್ಯಾಂಡ್ ಸವಾಲನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ ಅರ್ಹತಾ ಸುತ್ತಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಯುಎಇ ಟೂರ್ನಿಯಿಂದ ಹೊರನಡೆದಿದೆ.