►ಶುಕ್ರವಾರದ ರಜಾದಿನದಲ್ಲಿ ಬದಲಾವಣೆ
ಯುನೈಟೆಡ್ ಅರಬ್ ಎಮಿರೇಟ್ಸ್ ನ (UAE) ಸರಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಮುಂದಿನ ಜನವರಿಯಿಂದ ಹೊಸ ವಾರದ ರಜೆ ನಿಯಮವನ್ನು ಘೋಷಿಸಲಾಗಿದೆ. ಬದಲಾವಣೆಯ ಪ್ರಕಾರ ಶುಕ್ರವಾರದ ಜುಮುಆ ನಮಾಝ್ ಬಳಿಕ ರಜೆ ಇರುತ್ತದೆ. ಅದೇ ರೀತಿ ಶನಿವಾರ ಮತ್ತು ಆದಿತ್ಯವಾರ ಕೂಡಾ ವಾರದ ರಜಾ ದಿನ ಎಂದು ಘೋಷಿಸಲಾಗಿದೆ. ಸದ್ಯಕ್ಕೆ ಈ ನಿಯಮ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗುವುದಾದರೂ, ಭವಿಷ್ಯದಲ್ಲಿ ಖಾಸಗಿ ಕಂಪನಿಗಳು ಕೂಡಾ ಇದೇ ನಿಯಮವನ್ನು ಅನುಷ್ಟಾನಗೊಳಿಸುವ ಸಾಧ್ಯತೆಯೂ ಇದೆಯೆನ್ನಲಾಗಿದೆ.
ಹಿಂದೆ ವಾರದ ರಜೆ ಹೇಗಿತ್ತು ?
ಈ ಹಿಂದೆ ಯುಎಇಯಲ್ಲಿ ಶುಕ್ರವಾರ ಮತ್ತು ಶನಿವಾರ ಎರಡು ದಿನ ವಾರದ ರಜೆಯಾಗಿತ್ತು. ಇದೀಗ ಘೋಷಿಸಿರುವ ಹೊಸ ನಿಯಮದ ಪ್ರಕಾರ ಶುಕ್ರವಾರದ ಇಡೀ ದಿನದ ರಜೆಯಲ್ಲಿ ಬದಲಾವಣೆ ತರಲಾಗಿದ್ದು, ಅರ್ಧ ದಿನ ಮಾತ್ರ ರಜೆ ಇರಲಿದೆ. ಜೊತೆಗೆ ಆದಿತ್ಯವಾರ ಒಂದು ದಿನ ಹೆಚ್ಚುವರಿ ವಾರದ ರಜಾದಿನವಾಗಿ ಸೇರ್ಪಡೆಗೊಂಡಿದೆ. ಹೀಗಾಗಿ ಸರಕಾರಿ ಉದ್ಯೋಗಿಗಳು ವಾರದಲ್ಲಿ ನಾಲ್ಕುವರೆ ದಿನ ಮಾತ್ರ ಕೆಲಸ ನಿರ್ವಹಿಸುವಂತೆ ಮಾಡಲಾಗಿದೆ.
ಯುಎಇ ರಾಷ್ಟ್ರವು ಇಸ್ರೇಲ್ ಜೊತೆಗೆ ವ್ಯಾಪಾರ ಸಂಬಂಧ ಮರು ಪ್ರಾರಂಭಿಸಿದ ಬಳಿಕ ಇಸ್ರೇಲಿನ ವಸಾಹತಾಗಿ ಮಾರ್ಪಾಟಾಗುತ್ತಿದೆ ಎಂಬ ಆರೋಪಗಳ ಮಧ್ಯೆಯೇ ಒಂದು ಇಸ್ಲಾಮಿಕ್ ರಾಷ್ಟ್ರವಾದ ಯುಎಇ, ಮುಸ್ಲಿಮರ ಶುಕ್ರವಾರದ ಜುಮುಆ ದಿನದ ಪೂರ್ತಿ ರಜೆಯನ್ನು ಕಡಿತಗೊಳಿಸಿ, ಅರ್ಧ ದಿನಕ್ಕೆ ಮೊಟಕುಗೊಳಿಸಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.