ಬೀಜಿಂಗ್: ಚೀನಾದ ವಾಯವ್ಯ ಭಾಗದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಸ್ಥಳೀಯ ಉಯ್ಗರ್ ಮುಸ್ಲಿಮರ ಮಾನವ ಹಕ್ಕುಗಳ ದಮನದಲ್ಲಿ ಚೀನಾ ತೊಡಗಿರುವುದಾಗಿ, ಸೌದಿ ಅರೇಬಿಯಾ, ಸಿರಿಯಾ, ಯುಎಇ- ಅರಬ್ ಅಮೀರರ ಒಕ್ಕೂಟದ ವಿದ್ವಾಂಸರ ನಿಯೋಗವೊಂದು ಆ ಪ್ರದೇಶಕ್ಕೆ ಈ ವಾರದಲ್ಲಿ ಭೇಟಿ ನೀಡಲಿದೆ.
ಈ ತಜ್ಞರ ತಂಡವನ್ನು ಯುಎಇ ಬೆಂಬಲಿಸಿ ಎಲ್ಲ ನೆರವು ನೀಡುತ್ತಿದೆ. ಟಿಡಬ್ಲ್ಯುಎಂಸಿಸಿಸಿ- ಜಾಗತಿಕ ಮುಸ್ಲಿಂ ಸಮಿತಿಗಳ ಪರಿಷತ್ತು ನಿಯೋಗವನ್ನು ಈ ವಾರ ಕ್ಸಿಂಜಿಯಾಂಗ್’ನಲ್ಲಿ ಚೀನಾದ ಅಧಿಕೃತ ತಂಡ ಎದುರುಗೊಂಡು ಸತ್ಕರಿಸಲಿದೆ ಮತ್ತು ಅವರನ್ನು ‘ಉಗ್ರವಾದ ಮತ್ತು ಉಗ್ರ ಕೃತ್ಯ ನಿರ್ನಾಮ’ ಮ್ಯೂಸಿಯಮ್’ಗೆ ಕರೆದೊಯ್ಯಲಿದೆ. ಚೀನಾವು ಸಮಿತಿಗೆ ಎಲ್ಲ ಬಗೆಯ ಭಿನ್ನಾಭಿಪ್ರಾಯ ಮತ್ತು ಭಿನ್ನ ಕೃತ್ಯಗಳನ್ನು ವಿವರಿಸಲಿದೆ ಎಂದು ಹೇಳಲಾಗಿದೆ.
ಟಿಡಬ್ಲ್ಯುಎಂಸಿಸಿಸಿ ಚೇರ್ಮನ್ ಡಾ. ಆಲಿ ರಶೀದ್ ಅಲ್ ನ್ಯೂಮಿಯವರು ಈ ನಿಯೋಗದ ಮುಖ್ಯಸ್ಥರಾಗಿದ್ದು ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಚೀನಾದ ಆಡಳಿತ ಕ್ಸಿಂಜಿಯಾಂಗ್’ನ ಆ ಸುತ್ತಿನಲ್ಲಿ ಎಲ್ಲ ಬಗೆಯ ಉಗ್ರವಾದವನ್ನು ನಿರ್ನಾಮ ಮಾಡಲು ಹೊರಟಿರುವುದು ಶ್ಲಾಘನೀಯ. ಅದೇ ವೇಳೆ ಚೀನಾದ ನಾಯಕರು ಎಲ್ಲ ಪ್ರಜೆಗಳಿಗೂ ಸಮಾನವಾಗಿ ಸೇವೆ ಸಲ್ಲಿಸಬೇಕು” ಎಂದು ಈ ಹೇಳಿಕೆಯಲ್ಲಿ ಹೇಳಲಾಗಿದೆ.
ಕ್ಸಿಂಜಿಯಾಂಗ್ ಪ್ರಾಂತ್ಯದ ಉಯ್ಗರ್ ಮುಸ್ಲಿಮರ ಮೇಲೆ ಮಾನವ ಹಕ್ಕು ಉಲ್ಲಂಘಿಸಿ ದಾಳಿ, ಹಿಂಸಾ ದಮನ ನಡೆಯುತ್ತಿರುವುದಾಗಿ 2017ರಿಂದ ಅಧ್ಯಯನದ ವರದಿಗಳು ಪ್ರಕಟವಾಗುತ್ತಲೇ ಇವೆ.
ಚೀನಾದ ಆಡಳಿತವು ಮರು ಶಿಕ್ಷಣ ಕ್ಯಾಂಪ್ ಎಂದು ಉಯ್ಗರರನ್ನು ಕೂಡಿ ಹಾಕಿ ಕಿರುಕುಳ ನೀಡುತ್ತಿರುವುದಾಗಿ, ಲಕ್ಷಾಂತರ ಮುಸ್ಲಿಮರಿಗೆ ಚಿತ್ರಹಿಂಸೆ ನೀಡಿದ್ದಾಗಿಯೂ ವರದಿಯಾಗಿತ್ತು. ಲೈಂಗಿಕ ಕಿರುಕುಳ, ಮಹಿಳೆಯರಿಗೆ ಬಲವಂತದ ಕುಟುಂಬ ಯೋಜನಾ ಶಸ್ತ್ರಕ್ರಿಯೆ, ಅಲ್ಲದೆ ರಫ್ತು ಮಾಡಲು ಉಯ್ಗರ್ ಮುಸ್ಲಿಮರನ್ನು ಬಲವಂತದ ದುಡಿಮೆಗೆ ತೊಡಗಿಸಿಕೊಂಡಿರುವುದಾಗಿಯೂ ವರದಿಯಾಗಿತ್ತು.
“ಚೀನಾದಲ್ಲಿ ಮುಸ್ಲಿಮರನ್ನು ಗೌರವಯುತವಾಗಿ ನೋಡಬೇಕಾದುದು ಈಗಿನ ಅಗತ್ಯ. ಸ್ಥಳೀಯ ವಿಶಿಷ್ಟ ಜನರಾದ ಉಯ್ಗರ್ ಜನರು ದೇಶದಲ್ಲಿ ಕಿರುಕುಳ ನೀಡುವ ಇಲ್ಲವೇ ಕಿರುಕುಳಕ್ಕೆ ಒಳಗಾಗುವ ಬದಲು ಪರಸ್ಪರ ಗೌರವಾರ್ಹ ಸ್ಥಿತಿ ಪಡೆಯಬೇಕು” ಎಂಬ ನಿಟ್ಟಿನಲ್ಲಿ ನಿಯೋಗ ಕಣ್ಣಾಗಿರುತ್ತದೆ ಎಂದು ಡಾ. ಆಲಿ ರಶೀದ್ ಹೇಳಿದರು.
ಚೀನಾದಲ್ಲಿ ಶಿಕ್ಷಣದ ಮೂಲಕ ಎಲ್ಲ ವೈವಿಧ್ಯತೆಗಳನ್ನೂ ಒಗ್ಗೂಡಿಸುವ ಪದ್ಧತಿ ಇದೆ. ಆದರೆ ವಿಶಿಷ್ಟ ಮೂಲ ಸಂಪ್ರದಾಯಗಳ ಉಯ್ಗುರ್ ಜನರ ರೀತಿ ರಿವಾಜುಗಳು, ಅಸ್ಮಿತೆ, ಸಂಸ್ಕೃತಿ ಪ್ರಾದೇಶಿಕತೆ ನಾಶವಾಗಬಾರದು ಎಂಬುದು ನಮ್ಮ ಕಳಕಳಿ ಎಂದು ಅವರು ಹೇಳಿದರು.
ಸೌದಿ, ಸಿರಿಯಾ ಮತ್ತು ಎಮಿರೇಟ್ಸ್ ನ ಮುಸ್ಲಿಮ್ ವಿದ್ವಾಂಸರ ನಿಯೋಗವು ಸರಕಾರದ ವತಿಯಿಂದ ಹೋಗುತ್ತಿರುವುದರಿಂದ ಅವರು ನೇರವಾಗಿ ಹೋಗುವ ದೇಶದ ಸರಕಾರವನ್ನು ಖಂಡಿಸುವುದು ಸಾಧ್ಯವಿಲ್ಲ. ಚೀನಾದಿಂದ ಹೊರದಬ್ಬಿದ ಉಯ್ಗುರ್ ರನ್ನು ಮತ್ತೆ ಚೀನಾಕ್ಕೆ ಕರೆಸಿಕೊಳ್ಳುವುದು ಮತ್ತು ಉಯ್ಗುರ್ ಮುಸ್ಲಿಮರಿಗೆ ಗೌರವಯುತ ಬದುಕು ಸಿಗುವಂತೆ ಮಾಡಲು ಮಾತುಕತೆ ಆಡುವುದು ಹಾಗೂ ಸತ್ಯಾಸತ್ಯತೆ ಕಂಡುಕೊಳ್ಳುವ ಜವಾಬುದಾರಿಯನ್ನು ನಿಯೋಗ ಹೊತ್ತಿದೆ.
ಮುಸ್ಲಿಂ ವಿದ್ವಾಂಸರ ನಿಯೋಗವು ಪಶ್ಚಿಮ ಏಶಿಯಾದಿಂದ ಹೋಗುವ ಬಗೆಗೆ ಒಡಕು ಧ್ವನಿಯೂ ಇದೆ. ಚೀನಾವು ತನ್ನದೆಲ್ಲ ಸರಿ ಎಂದು ತೋರಿಸಲು ಈ ನಿಯೋಗವನ್ನು ಬರಮಾಡಿಕೊಳ್ಳುತ್ತಿದೆ. ಮರು ಶಿಕ್ಷಣ ಕ್ಯಾಂಪುಗಳ ಸತ್ಯ ಮತ್ತು ಬದುಕಿನ ನಿಜಾಂಶ ತೆರೆದಿಡುವ ಸಾಧ್ಯತೆ ಇಲ್ಲ ಎಂದು ಟೀಕಿಸಲಾಗುತ್ತಿದೆ.