ಯು.ಟಿ.ಖಾದರ್ ಬೆಂಬಲಿಗರು ನನಗೆ ಬೆದರಿಸಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದರು: ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಆರೋಪ

Prasthutha|

ಉಸ್ಮಾನ್ ಕಲ್ಲಾಪು, ಕಬರು ಮುಸ್ತಫಾ, ರಿಯಾಝ್ ಮತ್ತಿತರರು ಬೆದರಿಕೆ ಹಾಕಿದ್ದಾರೆ ಎಂದ ಅಲ್ತಾಫ್

- Advertisement -

ಮಂಗಳೂರು: ಉಳ್ಳಾಲ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಅವರ ಬೆಂಬಲಿಗರಾದ ಮುಸ್ತಫಾ ಯಾನೆ ಕಬರು ಮುಸ್ತಫಾ, ಉಸ್ಮಾನ್ ಕಲ್ಲಾಪು, ರಿಯಾಝ್ ಮತ್ತಿತರರು ನನಗೆ ಬೆದರಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಿದರು. ಮಾತ್ರವಲ್ಲ ಉಮೇದುವಾರಿಕೆ ವಾಪಸ್ ಪಡೆಯುವ ಪತ್ರಕ್ಕೆ ನನ್ನ ಸಹಿಯನ್ನು ಬಲವಂತವಾಗಿ ಪಡೆದು ನನ್ನನ್ನು ಬಲವಂತವಾಗಿ ಎಳೆದು ತಂದು ಚುನಾವಣಾಧಿಕಾರಿಯವರಿಗೆ ಪತ್ರ ಸಲ್ಲಿಸಿದ್ದಾರೆ ಎಂದು ಉಳ್ಳಾಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಳ ಆರೋಪಿಸಿದ್ದಾರೆ.


ಜೆಡಿಎಸ್ ಅಭ್ಯರ್ಥಿಯಾಗಿ ನಾನು ಏಪ್ರಿಲ್ 20ರಂದು ನಾಮಪತ್ರ ಸಲ್ಲಿಸಿದ್ದೇನೆ. 21ರಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ ನನ್ನ ನಾಮಪತ್ರ ಕ್ರಮಬದ್ಧವಾಗಿದ್ದು, ಸಿಂಧುತ್ವಗೊಂಡಿದೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. ಆದರೆ ಅದೇ ದಿನ ಯು.ಟಿ.ಖಾದರ್ ಬೆಂಬಲಿಗರಾದ ಮುಸ್ತಫಾ, ಉಸ್ಮಾನ್ ಕಲ್ಲಾಪು, ರಿಯಾಝ್ ಮತ್ತಿತರರು ಬೆದರಿಕೆ ಹಾಕಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದರು. ನನ್ನ ಮನೆಗೆ ರಾತ್ರಿ ಬಂದು ಬೆದರಿಕೆಯೊಡ್ಡಿದ್ದಾರೆ. ನನಗೆ ಜೀವ ಭಯವಿದೆ ಎಂದು ಅಲ್ತಾಫ್ ಅವರು ಚುನಾವಣಾಧಿಕಾರಿಗೆ ನೀಡಿದರು ಪತ್ರದಲ್ಲಿ ತಿಳಿಸಿದ್ದಾರೆ.

- Advertisement -


ನನ್ನ ಸ್ವಂತ ಇಚ್ಛೆಯ ಮೇರೆಗೆ ನಾನು ನಾಮಪತ್ರ ವಾಪಸ್ ಪಡೆದಿಲ್ಲ. ಕಾಂಗ್ರೆಸ್ ಪಕ್ಷದ ಬೆಂಬಲಿಗರು ನನ್ನನ್ನು ಹೆದರಿಸಿ, ನನ್ನ ಮೇಲೆ ಒತ್ತಾಯ ಹೇರಿ ವಾಪಸ್ ಪಡೆಯಲು ಚಿತಾವಣೆ ಮಾಡಿದ್ದಾರೆ. ನಾಮಪತ್ರ ಹಿಂಪಡೆಯುವ ಮೊದಲು ನನ್ನ ಅನುಮೋದಕರಿಗೆ ಮತ್ತು ನನ್ನ ಬೆಂಬಲಿಗರೊಂದಿಗೆ ಚರ್ಚಿಸಲು ಕೂಡ ಅವಕಾಶ ನೀಡದೆ ಗೂಂಡಾಗಳ ರೀತಿಯಲ್ಲಿ ವರ್ತಿಸಿದರು ಎಂದು ಅಲ್ತಾಫ್ ಆರೋಪಿಸಿದರು.
ನಾನು ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿದ್ದು, ನನ್ನ ಪಕ್ಷ ನನ್ನನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನೇಮಿಸಿದೆ. ಆದ್ದರಿಂದ ನನ್ನ ಪಕ್ಷದ ಧ್ಯೇಯೋದ್ದೇಶಗಳು ಹಾಗೂ ಪಕ್ಷದ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಳ್ಳಬೇಕಾಗಿದೆ. ಆದ್ದರಿಂದ ಬೆದರಿಕೆ ಮತ್ತು ಒತ್ತಡದ ಮೇಲೆ ಸಿಂಧುತ್ವಗೊಂಡಿರುವ ನಾಮಪತ್ರವನ್ನು ಹಿಂದೆಗೆದುಕೊಳ್ಳಲು ನೀಡಿರುವ ಪತ್ರವನ್ನು ಹಿಂಪಡೆಯಲು ಅವಕಾಶ ನೀಡಬೇಕು. ನಾನು ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಅಲ್ತಾಫ್ ಚುನಾವಣಾಧಿಕಾರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಆದರೆ ಈ ಮನವಿಯನ್ನು ತಿರಸ್ಕರಿಸುವ ಚುನಾವಣಾಧಿಕಾರಿ, ಹಿಂಪಡೆದ ನಾಮಪತ್ರವನ್ನು ಮರು ಊರ್ಜಿತವಿರಿಸಲು ಹಾಗೂ ಅಭ್ಯರ್ಥಿಗೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದ್ದರಿಂದ ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಅಲ್ತಾಫ್ ಕುಂಪಲ ಅವರಿಗೆ ಪ್ರತ್ಯುತ್ತರ ಬರೆದಿದ್ದಾರೆ.



Join Whatsapp