ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಯು.ಟಿ ಖಾದರ್‌ಗೆ ಸಿಎಂ ಪಟ್ಟ?

Prasthutha|

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷ ಆಗ್ರಹಿಸುತ್ತಿದೆ. ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ಪಾದಯಾತ್ರೆ ಮಾಡುತ್ತಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಪರಿಸ್ಥಿರಿ ಬಂದರೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ಸಿಎಂ ಸ್ಥಾನ‌ ಒಲಿದುಬರುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.

- Advertisement -

ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಕಾನೂನು ಕ್ರಮಗಳು ಜರುಗಿದರೆ ಸಿದ್ದರಾಮಯ್ಯ ಪದತ್ಯಾಗ ಮಾಡಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ವೇಳೆ ಡಿ.ಕೆ‌ ಶಿವಕುಮಾರ್ ಅವರಿಗೆ ಸಿಎಂ‌ ಸ್ಥಾನ ನೀಡಲು ಸಿದ್ದರಾಮಯ್ಯ ಒಪ್ಪುವುದು ಕಷ್ಟ, ಡಿ.ಕೆ‌ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡದಂತೆ ಸಿದ್ದರಾಮಯ್ಯನವರು ಹಠ ಹಿಡಿದರೆ ಹೈಕಮಾಂಡ್ ಮುಂದೆ ಹಿರಿಯ ಸಚಿವರಾದ ಜಿ.ಪರಮೇಶ್ವರ್, ಹೆಚ್.ಕೆ ಪಾಟೀಲ್, ಎಂ.ಬಿ ಪಾಟೀಲ್ ಅಥವಾ ಯು.ಟಿ‌ ಖಾದರ್ ಅವರ ಹೆಸರು ಪ್ರಸ್ತಾಪವಾಗಬಹುದು, ಅವರಲ್ಲಿ‌ ಒಬ್ಬರಿಗೆ ಸಿಎಂ‌ ಸ್ಥಾನ ಒಲಿದು ಬರಬಹುದು ಎಂಬ ವಿಶ್ಲೇಷಣೆ ನಡೆಯುತ್ತಿದೆ.

ಈ ನಾಲ್ವರ ಪೈಕಿ ಜಿ.ಪರಮೇಶ್ವರ್, ಹೆಚ್.ಕೆ ಪಾಟೀಲ್‌ ಮತ್ತು ಎಂ.ಬಿ ಪಾಟೀಲರಿಗೆ ಒಂದೊಂದು ಬಣದಿಂದ ವಿರೋಧ ವ್ಯಕ್ತವಾಗಬಹುದು, ಪರಮೇಶ್ವರ್ ಆಯ್ಕೆಗೆ ಸಿದ್ದರಾಮಯ್ಯ ಬಣ ವಿರೋಧ ಮಾಡಿದರೆ, ಹೆಚ್.ಕೆ ಪಾಟೀಲ್‌ ಮತ್ತು‌ ಎಂ.ಬಿ ಪಾಟೀಲ್‌ ಅವರ ಆಯ್ಕೆಗೆ ಡಿಕೆ‌ ಶಿವಕುಮಾರ್ ಬಣ ವಿರೋಧ ವ್ಯಕ್ತಪಡಿಸಬಹುದು. ಇದರಿಂದ ಎರಡೂ ಬಣಗಳ ಜೊತೆ ಉತ್ತಮ‌ ಸಂಬಂಧ ಇಟ್ಟುಕೊಂಡಿರುವ ಯು.ಟಿ ಖಾದರ್ ಅವರು ಸಿಎಂ ಸ್ಥಾನಕ್ಕೆ ಎರಡೂ ಬಣಗಳ ಒಮ್ಮತದ ಅಭ್ಯರ್ಥಿಯಾಗಬಹುದು ಎಂಬ ಚರ್ಚೆಗಳು ನಡೆದಿದೆ.

- Advertisement -

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರೊಂದಿಗೆ ಯು.ಟಿ‌ ಖಾದರ್ ಉತ್ತಮ ಸಂಬಂಧವನ್ನು ಹೊಂದಿದ್ದು ಹೆಚ್ಚಿನ ಕಾಂಗ್ರೆಸ್ ಶಾಸಕರ ಜೊತೆಗೂ ಅವರು ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅಲ್ಲದೇ ಯು.ಟಿ ಖಾದರ್ ಅವರಿಗೆ ಆಡಳಿತದಲ್ಲೂ ಅನುಭವ ಇದೆ. ಐದು‌ ಬಾರಿ ಶಾಸಕರಾಗಿ ಎರಡು‌ ಬಾರಿ ಸಚಿವರಾಗಿ ವಿವಿಧ ಖಾತೆಗಳನ್ನು ನಿಭಾಯಿಸಿರುವ ಅವರು ಸದ್ಯ ವಿಧಾನಸಭಾಧ್ಯಕ್ಷರಾಗಿಯೂ ಯಶಸ್ಸು ಕಂಡಿದ್ದಾರೆ.

ಒಂದು ವೇಳೆ ಈಗ ಹಬ್ಬಿರುವ ಸುದ್ದಿಯಂತೆ ಯು.ಟಿ‌ ಖಾದರ್ ಅವರಿಗೆ ಸಿಎಂ‌ ಸ್ಥಾನ‌ ಒಲಿದು ಬಂದರೆ ಕರ್ನಾಟಕ‌ ರಾಜ್ಯದ ಮೊದಲ‌ ಮುಸ್ಲಿಂ ಮುಖ್ಯಮಂತ್ರಿ‌ ಎಂಬ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. ಮಾತ್ರವಲ್ಲ ದಕ್ಷಿಣ ಭಾರತ ರಾಜ್ಯಗಳ ಮೊದಲ ಮುಸ್ಲಿಂ‌ ಮುಖ್ಯಮಂತ್ರಿ ಎಂಬ ಖ್ಯಾತಿಯೂ ಒಲಿದು ಬರಲಿದೆ. ಕರ್ನಾಟಕದ ಮೊದಲ‌ ಮುಸ್ಲಿಂ‌ ಸ್ಪೀಕರ್ ಎಂಬ ಖ್ಯಾತಿ ಪಡೆದಿರುವ ಯು.ಟಿ ಖಾದರ್ ಕರ್ನಾಟಕದ ಮೊದಲ‌ ಮುಸ್ಲಿಂ‌ ಮುಖ್ಯಮಂತ್ರಿ ಆಗಲಿ ಎಂದು ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಹರಸುತ್ತಿದ್ದಾರೆ.‌

ಸದ್ಯದ ಪರಿಸ್ಥಿತಿಯಲ್ಲಿ‌ ಸಿಎಂ‌ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆ ಕಂಡುಬರುತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ‌ ಸಿಎಂ‌ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಯು.ಟಿ‌ ಖಾದರ್ ಅವರ ಹೆಸರು ಮುನ್ನಲೆಗೆ ಬಂದಿದೆ.



Join Whatsapp