ಸೋಲ್: ಉಕ್ರೇನ್ ವಿರುದ್ಧ ಯುದ್ಧದಲ್ಲಿ ನಿರತವಾಗಿರುವ ರಷ್ಯಾಕ್ಕೆ ಉತ್ತರ ಕೊರಿಯಾ ಕಳೆದ ವರ್ಷದಿಂದಲೂ ಸುಮಾರು 7 ಸಾವಿರ ಕಂಟೇನರ್ ಶಸ್ತ್ರಾಸ್ತ್ರಗಳು ಮತ್ತು ಇತರ ಮಿಲಿಟರಿ ಉಪಕರಣಗಳನ್ನು ರವಾನಿಸಿದೆ ಎಂದು ದಕ್ಷಿಣ ಕೊರಿಯಾದ ರಕ್ಷಣಾ ಸಚಿವಶಿನ್ ವೊನ್-ಸಿಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ನಡೆದ ಶೃಂಗಸಭೆಯ ನಂತರ ಶಸ್ತ್ರಾಸ್ತ್ರಗಳ ವರ್ಗಾವಣೆ ವೇಗ ಪಡೆದುಕೊಂಡಿದೆ ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ತನ್ನ ಪಡೆಗಳ ಉನ್ನತೀಕರಣಕ್ಕೆ ಅವಶ್ಯವಿರುವ ಮಿಲಿಟರಿ ಉಪಕರಣ, ಆರ್ಥಿಕ ನೆರವು ಹಾಗೂ ಆಹಾರವನ್ನು ಪಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ಉತ್ತರ ಕೊರಿಯಾ ಈಚೆಗೆ ರಷ್ಯಾಕ್ಕೆ ಫಿರಂಗಿ ಶೆಲ್‌ಗಳು, ಕ್ಷಿಪಣಿಗಳು ಮತ್ತು ಇನ್ನಿತರ ಯುದ್ಧೋಪಕರಣಗಳನ್ನು ಪೂರೈಸುತ್ತಿದೆ ಎಂದು ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಅಧಿಕಾರಿಗಳು ಆರೋಪಿಸಿದ್ದಾರೆ.
ಆದರೆ ರಷ್ಯಾ ಮತ್ತು ಉತ್ತರ ಕೊರಿಯಾ ಈ ಆರೋಪವನ್ನು ನಿರಾಕರಿಸಿವೆ.