ನವದೆಹಲಿ: ಭಾರತ- ಚೀನಾ ಗಡಿಯ ಗೋಯ್ಲಾಂಗ್ ಪಟ್ಟಣದಲ್ಲಿ ಎರಡು ತಿಂಗಳ ಹಿಂದೆ ಇಬ್ಬರು ಯುವಕರು ನಾಪತ್ತೆಯಾಗಿದ್ದು, ಇಂದಿಗೂ ಅವರು ಪತ್ತೆಯಾಗಿಲ್ಲ. ಎಫ್ ಐಆರ್ ದಾಖಲಾಗಿದೆ ಮತ್ತು ಹುಡುಕಾಟ ಮುಂದುವರಿದಿದೆ ಎಂದು ಬಿಜೆಪಿ ಶಾಸಕ ದಸಾಂಗ್ಲು ಪುಲ್ ಹೇಳಿದ್ದಾರೆ.
ಆ ಯುವಕರಿಬ್ಬರು ಗಡಿಯಲ್ಲಿ ನಾಪತ್ತೆಯಾಗಿ ಎರಡು ತಿಂಗಳುಗಳೇ ಕಳೆದವು. ಬಾತೈಲುಮ್ ತಿಕ್ರಿ ಮತ್ತು ಬಾಯಿಂಗ್ಸೊ ಮಾನ್ಯುಹಾಡ್ ಎಂಬಿಬ್ಬರು ಯುವಕರು ನಾಪತ್ತೆಯಾದುದು ಆಗಸ್ಟ್ ಕೊನೆಯಲ್ಲಿ. “ಈ ಯುವಕರು ತಿಳಿಯದೆ ಗಡಿ ದಾಟಿರಬೇಕು; ಚೀನೀ ಸೈನಿಕರು ಅವರನ್ನು ಅಪಹರಿಸಿರಬೇಕು. ಅವರ ಪತ್ತೆಗೆ ಸಹಾಯ ಮಾಡುವಂತೆ ನಾವು ಕೇಂದ್ರ ಸರಕಾರಕ್ಕೆ ಮನವಿ ಮಾಡುತ್ತೇವೆ” ಎಂದು ನಾಪತ್ತೆಯಾದ ಯುವಕನೊಬ್ಬನ ಅಣ್ಣ ಹೇಳಿದರು.
ಆ ಇಬ್ಬರು ಯುವಕರೂ ಗಡಿಗೆ ಸಮೀಪದ ಗೋಯ್ಲಾಂಗ್ ಪಟ್ಟಣಕ್ಕೆ ಸೇರಿದವರು. ಈ ಸಂಬಂಧ ಸ್ಥಳೀಯ ಬಿಜೆಪಿ ಶಾಸಕ ದಸಾಂಗ್ಲು ಪುಲ್ “ಎಫ್ಐಆರ್ ದಾಖಲಾಗಿದೆ. ಅರುಣಾಚಲ ಪ್ರದೇಶದ ಸಂಸದ ತಾಪಿರ್ ಗಾವೋ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಜೊತೆಗೆಲ್ಲ ಈ ಸಂಬಂಧ ಮಾತನಾಡಿದ್ದೇನೆ” ಎಂದರು.
“ಅವರು ನಾಪತ್ತೆಯಾದುದು ಆಗಸ್ಟ್ 20ರಂದು, ಅಂದರೆ ಎರಡೂವರೆ ತಿಂಗಳುಗಳೇ ಆದವು. ಅವರು ಗಡಿ ಪ್ರದೇಶದಲ್ಲಿ ಸ್ಥಳೀಯ ಗಿಡಮೂಲಿಕೆ ಮದ್ದುಗಳನ್ನು ಸಂಗ್ರಹಿಸಲು ಹೋಗಿದ್ದರು. ಅಲ್ಲಿಂದ ಅವರ ಯಾವುದೇ ಸುಳಿವು ಇಲ್ಲ. ಸಂಬಂಧಿಸಿದವರ ಜೊತೆಗೆಲ್ಲ ನಾನು ಮಾತನಾಡಿದ್ದೇನೆ. ಆಡಳಿತ ಯಂತ್ರ ಮತ್ತು ಸೇನೆಯವರು ರಕ್ಷಣಾ ಕಾರ್ಯಾಚರಣೆಯಲ್ಲಿ ಈಗಲೂ ತೊಡಗಿಕೊಂಡಿದ್ದಾರೆ.” ಎಂದು ದಸಾಂಗ್ಲು ಪುಲ್ ಹೇಳಿದರು.
ಈ ವರ್ಷದ ಜನವರಿಯಲ್ಲಿ ಮಿರಿಯಂ ತಾರೊನ್ ಎಂಬ 17ರ ತರುಣ ಭಾರತ ಚೀನಾ ಗಡಿಯಲ್ಲಿ ನಾಪತ್ತೆಯಾಗಿದ್ದ. ಆ ತರುಣನನ್ನು ಚೀನಾ ಸೈನಿಕರು ಹಿಡಿದು ಭಾರತದ ಸೈನಿಕರಿಗೆ ಹಸ್ತಾಂತರಿಸಿದ್ದರು.