ವಿಜಯವಾಡ (ಆಂಧ್ರಪ್ರದೇಶ): ಬೆಕ್ಕು ಕಚ್ಚಿ ವೈದ್ಯರೊಬ್ಬರ ಪತ್ನಿ ಸೇರಿ ಇಬ್ಬರು ಮಹಿಳೆಯರು ದುರಂತ ಅಂತ್ಯ ಕಂಡ ಘಟನೆ ವಿಜಯವಾಡದಲ್ಲಿ ಸಂಭವಿಸಿದೆ.
ವಿಜಯವಾಡದ ಕೃಷ್ಣಾ ಜಿಲ್ಲೆಯ ಮೊವ್ವ ಮಂಡಲದ ವೇಮುಲಮಾಡದ ಎಸ್ ಸಿ ಕಾಲನಿಯ ಆರ್ಎಂಪಿ ವೈದ್ಯ ಬೊದ್ದು ಬಾಬುರಾವ್ ಪತ್ನಿ ನಾಗಮಣಿ (43) ಹಾಗೂ ನಿವೃತ್ತ ಆರ್ ಟಿಸಿ ಕಂಡಕ್ಟರ್ ಸಾಲಿ ಭಾಗ್ಯರಾವ್ ಪತ್ನಿ ಕಮಲಾ (64) ಮೃತ ದುರ್ದೈವಿಗಳು. ಈ ಇಬ್ಬರು ಮಹಿಳೆಯರಿಗೆ 2 ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಇಬ್ಬರೂ ಟಿಟಿ ಇಂಜೆಕ್ಷನ್ ತೆಗೆದುಕೊಂಡಿದ್ದರಾದರೂ ಇತ್ತೀಚಿಗೆ ಇವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಕಮಲಾ ಮತ್ತು ನಾಗಮಣಿ ಇಬ್ಬರನ್ನೂ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಮಾ.5ರಂದು ಗುಂಟೂರು ಜಿಲ್ಲೆಯ ಮಂಗಳಗಿರಿ ಎನ್ ಆರ್ ಐ ಆಸ್ಪತ್ರೆಯಲ್ಲಿ ಕಮಲಾ ಕೊನೆಯುಸಿರೆಳೆದರು. ಅತ್ತ ವಿಜಯವಾಡದ ಕಾರ್ಪೋರೇಟ್ ಆಸ್ಪತ್ರೆಯಲ್ಲಿ ನಾಗಮಣಿ ಮೃತಪಟ್ಟಿದ್ದಾರೆ. ಮಹಿಳೆಯರಿಬ್ಬರಿಗೂ ರೇಬಿಸ್ ಸೋಂಕು ತಗುಲಿತ್ತು. ದೇಹಪೂರ ವಿಷ ವ್ಯಾಪಿಸಿದ್ದರಿಂದ ಮೃತಪಟ್ಟಿದ್ದಾರೆ ಎಂದು ಅಲ್ಲಿನ ವೈದ್ಯಾಧಿಕಾರಿ ಡಾ.ಶಾಂತಿ ಶಿವರಾಮ ಕೃಷ್ಣರಾವ್ ತಿಳಿಸಿದ್ದಾರೆ.
ಹುಚ್ಚು ನಾಯಿ ಬೆಕ್ಕು ಕಚ್ಚಿತ್ತು: ಹುಚ್ಚು ನಾಯಿ ಕಚ್ಚಿದ್ದ ಬೆಕ್ಕೇ ಕೆಲ ದಿನಗಳ ಬಳಿಕ ನಾಗಮಣಿ ಮತ್ತು ಕಮಲಾ ಅವರನ್ನು ಕಚ್ಚಿತ್ತು. ಬೆಕ್ಕಿಗೆ ರೇಬಿಸ್ ಇರುವ ಬಗ್ಗೆ ಅರಿಯದ ಮಹಿಳೆಯರು ಆ ವೇಳೆ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಆ ಹುಚ್ಚು ನಾಯಿ ಸತ್ತ ಕೆಲವೇ ದಿನಗಳಲ್ಲಿ ಆ ಬೆಕ್ಕು ಕೂಡ ಸತ್ತಿದೆ. ಇದೀಗ ಮಹಿಳೆಯರೂ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.