ಬೆಂಗಳೂರು: ಹೆಣ್ಣೂರಿನಲ್ಲಿ ನಡೆದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧ ತಲೆಮರೆಸಿಕೊಂಡಿದ್ದ ಇಬ್ಬರು ಮಹಿಳೆಯರನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಾಲಕನ ಅಪಹರಣಕ್ಕೆ ಸಹಾಯ ಮಾಡಿದ್ದ ಮಹಿಳೆಯರಾದ ಬಿಹಾರ ಮೂಲದ ದುರ್ಗಾದೇವಿ,ಹಾಗೂ ಮಂಗೀತಾ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಬಂಧಿತ ಇಬ್ಬರು ಮಹಿಳೆಯರು ಹೊರಮಾವಿನ ಬಳಿ ಧಮ್ಮದೀಪ್ ಎಂಬ 11ವರ್ಷದ ಬಾಲಕನನ್ನು ಅಪಹರಿಸಿದ್ದರು. ಮಂಗೀತಾ ಆರೋಪಿ ದುರ್ಗಾದೇವಿಗೆ 10 ಲಕ್ಷ ರೂ. ಕೊಡುತ್ತೇನೆ ಬಾಲಕನನ್ನು ಸುರಕ್ಷಿತವಾಗಿ ಇರಿಸುವಂತೆ ಹೇಳಿದ್ದಳು. ಅದರಂತೆ ದುರ್ಗಾದೇವಿ ಜಿಗಣಿಯಲ್ಲಿದ್ದ ಸಂಬಂಧಿ ಬಂಧಿತ ಗೌರವ್ ಸಿಂಗ್ ಬಳಿ ಬಾಲಕನನ್ನ ಬಿಟ್ಟಿದ್ದಳು. ದುರ್ಗಾದೇವಿ ಗೌರವ್ ಸಿಂಗ್ಗೂ ಹಣ ನೀಡೋದಾಗಿ ದುರ್ಗಾದೇವಿ ಹೇಳಿದ್ದಳು. ಇದೀಗ ಪ್ರಕರಣ ಸಂಬಂಧ ಮಂಗಿತಾ, ಗೌರವ್ ಸಿಂಗ್ ಹಾಗೂ ದುರ್ಗಾದೇವಿ ಸೇರಿ ಮೂವರನ್ನು ಬಂಧಿಸಲಾಗಿದೆ.
ಕೆಲವೇ ಗಂಟೆಗಳಲ್ಲಿ ಮಗು ರಕ್ಷಣೆ:
ಕಳೆದ ಜೂನ್ 8ರ ಸಂಜೆ 6ರ ವೇಳೆ ಆಟವಾಡುತ್ತಿದ್ದ ಬಾಲಕನನ್ನು ಈಜುಕೊಳಕ್ಕೆ ಕರೆದೊಯ್ಯುವುದಾಗಿ ನಂಬಿಸಿ ಹೆಣ್ಣೂರಿನಿಂದ ಅಪಹರಿಸಲಾಗಿತ್ತು. ಅಪಹರಿಸಿದ್ದ ಬಾಲಕ ಹೊರಮಾವು ನಿವಾಸಿಯಾಗಿರುವ ಬಿಎಂಟಿಸಿ ಚಾಲಕ ಸುಭಾಷ್ ಎಂಬುವವರ ಪುತ್ರನಾಗಿದ್ದ. ಅಪಹರಿಸಿದ್ದ ಆರೋಪಿಗಳು ಪೋಷಕರಿಗೆ ಕರೆ ಮಾಡಿ ಸುಮಾರು 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪೋಷಕರು ಅದೇ ದಿನ ರಾತ್ರಿ 9ರ ವೇಳೆ ಹೆಣ್ಣೂರು ಪೊಲೀಸರಿಗೆ ಬಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಮಗುವನ್ನು ರಕ್ಷಿಸಿದ್ದರು.
ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳ ಮೊಬೈಲ್ ಸಂಖ್ಯೆ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಜಿಗಣಿ ಬಳಿ ಫಾರ್ಮ್ಹೌಸ್ನಲ್ಲಿದ್ದ ಬಾಲಕನನ್ನು ಸಿನಿಮೀಯ ರೀತಿ ಕಾಂಪೌಂಡ್ ಹಾರಿ ಒಳ ನುಗ್ಗಿ ರಕ್ಷಣೆ ಮಾಡಿ, ನೇಪಾಳ ಮೂಲದ ಆರೋಪಿಯನ್ನ ಬಂಧಿಸಲಾಗಿತ್ತು.