ಎರಡು ಬಾರಿಯ ಟಿ20 ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲೇ ಟೂರ್ನಿಯಿಂದ ಹೊರನಡೆದಿದೆ. ಹೊಬಾರ್ಟ್‌ನಲ್ಲಿ ನಡೆದ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಐರ್ಲೆಂಡ್ ತಂಡ ಕೆರಿಬಿಯನ್ನರನ್ನು 9 ವಿಕೆಟ್‌ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಸೂಪರ್12 ಹಂತಕ್ಕೆ ಪ್ರವೇಶಿಸಿದೆ.
2007ರ ಬಳಿಕ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್, ಟಿ20 ವಿಶ್ವಕಪ್‌ನ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಮತ್ತೊಂದೆಡೆ 2009ರ ಬಳಿಕ ಇದೇ ಮೊದಲ ಬಾರಿಗೆ ಐರ್ಲೆಂಡ್, ಟಿ20 ವಿಶ್ವಕಪ್‌ನ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿದೆ.
ಐರ್ಲೆಂಡ್‌ಗೆ 9 ವಿಕೆಟ್‌ಗಳ ಭರ್ಜರಿ ಜಯ
ಪಾಲ್ ಸ್ಟಿರ್ಲಿಂಗ್ ಮತ್ತು ಪಾಲ್ ಡೆಲಾನಿ ಸಾಹಸದಿಂದ ಐರ್ಲೆಂಡ್, ಹೊಬಾರ್ಟ್‌ನಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಬ್ರಾಂಡನ್ ಕಿಂಗ್ ಗಳಿಸಿದ ಅರ್ಧಶತಕದ ( 62 ರನ್) ನೆರವಿನಿಂದ 5 ವಿಕೆಟ್ ನಷ್ಟದಲ್ಲಿ 146 ರನ್‌ಗಳಿಸಿತ್ತು. ಐರ್ಲೆಂಡ್ ಪರ ಬೌಲಿಂಗ್‌ನಲ್ಲಿ ಪಾಲ್ ಡೆಲಾನಿ, ತನ್ನ 4 ಓವರ್‌ಗಳ ದಾಳಿಯಲ್ಲಿ 16 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು.
ಗೆಲ್ಲಲೇ ಬೇಕಾದ ಪಂದ್ಯದಲ್ಲಿ ನಾಯಕ ಆಂಡಿ ಬಾಲ್ಬಿರ್ನಿ ಮತ್ತು ಪಾಲ್ ಸ್ಟಿರ್ಲಿಂಗ್, ಐರ್ಲೆಂಡ್ವ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 23 ಎಸೆತಗಳಲ್ಲಿ 37 ರನ್‌ಗಳಿಸಿ ಬಾಲ್ಬಿರ್ನಿ ನಿರ್ಗಮಿಸಿದರೆ, ಸ್ಟಿರ್ಲಿಂಗ್ ಅಮೋಘ 66 ರನ್ ಗಳಿಸಿ ಅಜೇಯರಾಗುಳಿದರು. 48 ಎಸೆತಗಳ ಈ ಸರಣೀಯ ಇನ್ನಿಂಗ್ಸ್ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಮೂರನೇ ವಿಕೆಟ್‌ಗೆ ಬಾಲ್ಬಿರ್ನಿ ಜೊತೆಯಾದ ವಿಕೆಟ್ ಕೀಪರ್ ಲೋರ್ಕನ್ ಟಕರ್ 45 ರನ್‌ಗಳಿಸಿದರು.
ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸ್ಕಾಟ್ಲೆಂಡ್ ವಿರುದ್ಧ 42 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿತಾದರೂ ಐರ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಯಾವುದೇ ಹೋರಾಟ ಪ್ರದರ್ಶಿಸದೇ ಶರಣಾಗುವ ಮೂಲಕ ಪ್ರಮುಖ ಕೂಟದಿಂದ ಆರಂಭದಲ್ಲೇ ನಿರ್ಗಮಿಸಿದೆ.
ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಶನಿವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ನ್ಯೂಜಿಲೆಂಡ್ ತಂಡದ ಸವಾಲನ್ನು ಎದುರಿಸಲಿದೆ. ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸೆಣಸಾಡಲಿದೆ.