ಪಟ್ನಾ: ಬಿಹಾರ ಅಜಂಪುರದ ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಏಕಕಾಲಕ್ಕೆ ಇಬ್ಬರು ಶಿಕ್ಷಕರು ಪಾಠ ಮಾಡಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಇದು ಸರ್ಕಾರಿ ಶಾಲೆಗಳ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.
ವಿಡಿಯೊದಲ್ಲಿ ನೋಡಿದರೆ ಬಿಹಾರದ ಸರ್ಕಾರಿ ಶಾಲೆಯ ಸ್ಥಿತಿಯು ಸಂಪೂರ್ಣವಾಗಿ ವಿಷಾದನೀಯವಾಗಿದೆ. ವೈರಲ್ ಆಗಿರುವ ವಿಡಿಯೊ ಒಂದರಲ್ಲಿ , ಶಾಲೆಯಲ್ಲಿ ಒಂದೇ ಕಪ್ಪು ಹಲಗೆಯ ಎರಡೂ ಬದಿಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಉರ್ದು ಎರಡನ್ನೂ ಒಮ್ಮೆಗೆ ಹೇಳಿಕೊಡುವುದನ್ನು ಕಾಣಬಹುದು.
ಈ ಕುರಿತು ಮಾತನಾಡಿರುವ ಸಹಾಯಕ ಶಿಕ್ಷಕಿ ಕುಮಾರಿ ಪ್ರಿಯಾಂಕಾ, 2017ರಲ್ಲಿ ಉರ್ದು ಪ್ರಾಥಮಿಕ ಶಾಲೆಯನ್ನು ಸರ್ಕಾರದ ಆದೇಶದ ಮೇರೆಗೆ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು. ನಮ್ಮ ಶಾಲೆಗೆ ತರಗತಿ ಕೊಠಡಿಗಳ ಕೊರತೆಯಿದೆ. ಒಂದೇ ಕೊಠಡಿಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಕಲಿಸಲಾಗುತ್ತದೆ. ನಮ್ಮಲ್ಲಿ 3 ಶಿಕ್ಷಕರು ಇದ್ದಾರೆ. ಅವರು ಕಲಿಸಲು ಕಪ್ಪು ಹಲಗೆಯನ್ನು 2 ಭಾಗಗಳಾಗಿ ವಿಂಗಡಿಸುತ್ತಾರೆ ಎಂದು ಹೇಳಿದ್ದಾರೆ.