ಚಿತ್ತೂರು: ಇಂದು ಮುಂಜಾನೆ ಆಂಧ್ರ ಪ್ರದೇಶದ ಚಿತ್ತೂರು ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಚಾಲಕ ಸಾವನ್ನಪ್ಪ, ಇತರ ಐವರು ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ.
ಇವರೆಲ್ಲರೂ ಬೆಂಗಳೂರಿನ ಶಿವಾಜಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿ ಗಳಾಗಿದ್ದು, ತನಿಖೆಯ ಸಂಬಂಧ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಇವರು ಚಲಿಸುತ್ತಿದ್ದ ವಾಹನ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪಿಎಸ್ ಐ ಅವಿನಾಶ, ಕಾನ್ಸ್ ಸ್ಟೆಬಲ್ ಅನಿಲ್ ಸೇರಿ ಮೂವರು ಮೃತಪಟ್ಟಿದ್ದಾರೆ.
ಗಾಂಜಾ ಪ್ರಕರಣವೊಂದರ ಸಂಬಂಧ ಆರೋಪಿಯನ್ನು ಬಂಧಿಸಲು ತೆರಳಿದ್ದಾಗ ಇಂದು ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಪಿಎಸ್ಐ ಅವಿನಾಶ್ (29) ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ರೋಲವಾಡಿ ಗ್ರಾಮದವರು. ಕಾನ್ಸ್ಟೆಬಲ್ ಅನಿಲ್ ಮುಲಿಕ್ (26) ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಳಕೆರೆ ಗ್ರಾಮದವರು. ಖಾಸಗಿ ಕ್ಯಾಬ್ ಚಾಲಕ ಜೋಸೆಫ್ ಸಹ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಗಾಯಾಳು ಕಾನ್ಸ್ಟೆಬಲ್ ಶರಣಬಸವ ಅವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ
ಗಾಯಗೊಂಡ ಸಿಬ್ಬಂದಿಗಳ ನೆರವಿಗೆ ಧಾವಿಸಿ ಅತ್ಯುತ್ತಮ ಚಿಕಿತ್ಸೆ ದೊರಕಿಸಲು ಎಲ್ಲಾ ಅಗತ್ಯ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ.
ಸಾರ್ವಜನಿಕರ ಪ್ರಾಣ ಹಾಗೂ ಆಸ್ತಿಪಾಸ್ತಿಗಳ ರಕ್ಷಿಸುವ ಕಾರ್ಯದಲ್ಲಿ, ಪೊಲೀಸ್ ಸಿಬ್ಬಂದಿ ಮೃತ ಪಟ್ಟಿರುವುದು ಅತ್ಯಂತ ನೋವು ತಂದಿದೆ ಎಂದೂ ಸಚಿವರು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರಿನ ಬಳಿ ಸಂಭವಿಸಿದ ಇನ್ನೊಂದು ಭೀಕರ ಅಪಘಾತದಲ್ಲಿ ಐದು ಮಂದಿ ಮೃತ ಪಟ್ಟ ಘಟನೆಯ ಬಗ್ಗೆಯೂ ಸಚಿವರು ಪ್ರತಿಕ್ರಿಯಿಸಿ, ದುಃಖ ತಂದಿದೆ ಎಂದೂ ಸಚಿವರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರು, ಘಟನೆಯ ಸಂಬಂಧ ತನಿಖೆಯನ್ನು ನಡೆಸಿದ್ದಾರೆ ಎಂದೂ ಹೇಳಿದ್ದಾರೆ