ನರಗುಂದ: ಹೋಟೆಲ್ ಬಂದ್ ಮಾಡಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ಇಬ್ಬರು ಮುಸ್ಲಿಮ್ ಯುವಕರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಓರ್ವ ಯುವಕ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ನರಗುಂದ ನಿವಾಸಿ ಸಮೀರ್ ಶಹಾಪುರ (19) ಮೃತಪಟ್ಟ ಯುವಕ. ಗಂಭೀರ ಗಾಯಗೊಂಡ ಸಂಶೀರ್ ಅವರು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನರಗುಂದದಲ್ಲಿ ಹೋಟೆಲ್ ನಡೆಸುತ್ತಿದ್ದ ಸಮೀರ್ ನಿನ್ನೆ ರಾತ್ರಿ ಹೋಟೆಲ್ ಬಂದ್ ಮಾಡಿ ಸಮೀಪದಲ್ಲೇ ಸ್ಟುಡಿಯೋ ಅಂಗಡಿ ಇಟ್ಟುಕೊಂಡಿರುವ ಸ್ನೇಹಿತ ಸಂಶೀರ್ ಅವರನ್ನು ಕರೆದುಕೊಂಡು ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ನರಗುಂದ ಸ್ಟೇಟ್ ಬ್ಯಾಂಕ್ ಸಮೀಪ ಕಾದು ಕುಳಿತಿದ್ದ ಸಂಘಪರಿವಾರದ ಸುಮಾರು 10-15 ಮಂದಿ ಏಕಾಏಕಿ ಬೈಕ್ ತಡೆದು ನಿಲ್ಲಿಸಿ ಮಾರಕಾಸ್ತ್ರಗಳಿಂದ ಇಬ್ಬರ ಮೇಲೂ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಸಮೀರ್ ಅವರ ಎದೆಗೆ ಚಾಕುವಿನಿಂದ ಇರಿದಿದ್ದು, ಸಂಶೀರ್ ಅವರ ಬೆನ್ನಿಗೆ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಸ್ಥಳೀಯರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಸಮೀರ್ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ. ಸಂಶೀರ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರೂ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಂಘಪರಿವಾರದ ಕಾರ್ಯಕರ್ತರಾದ ಮಲ್ಲಿಕಾರ್ಜುನ ಹಿರೇಮಠ, ಕುಮಾರ್ ಸೇರಿದಂತೆ ಇತರರು ಈ ಕೃತ್ಯವೆಸಗಿದ್ದಾರೆ ಎಂದು ಸಂತ್ರಸ್ತ ಕುಟುಂಬ ದೂರು ನೀಡಿದೆ.
ಇತ್ತೀಚೆಗೆ ನರಗುಂದದಲ್ಲಿ ಎರಡು ಕೋಮುಗಳ ನಡುವೆ ಸಣ್ಣ ಪ್ರಮಾಣದಲ್ಲಿ ಘರ್ಷಣೆ ನಡೆದಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಲಾಠಿಚಾರ್ಜ್ ನಡೆಸಿದ್ದರು. ಈ ಬಗ್ಗೆ ಉಭಯ ತಂಡಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇದನ್ನೇ ನೆಪವಾಗಿಟ್ಟು ಸೋಮವಾರ ಸಂಘಪರಿವಾರದ ಕಾರ್ಯಕರ್ತರು ನರಗುಂದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದರು. ಮಾತ್ರವಲ್ಲ ಈ ವೇಳೆ ಸಂಘಪರಿವಾರದ ನಾಯಕರು ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಕೂಡ ಮಾಡಿದ್ದರು. ಇದರಿಂದ ಪ್ರಚೋದಿತರಾದ ಸಂಘಪರಿವಾರದ ಕಾರ್ಯಕರ್ತರು ಇಬ್ಬರು ಮುಸ್ಲಿಮ್ ಯುವಕರ ಮೇಲೆ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.