ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದ ‘ಚಿಲುಮೆ’ ಸಂಸ್ಥೆಯ ಮುಖ್ಯಸ್ಥ, ಬಂಧಿತ ಆರೋಪಿ ರವಿಕುಮಾರ್ ಆಪ್ತರಾದ ಅಭಿಷೇಕ್ ಹಾಗೂ ಮಾರುತಿಗೌಡ ಎಂಬವರನ್ನು ಹಲಸೂರು ಗೇಟ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ವಿಚಾರಣೆ ವೇಳೆ ರವಿ ನೀಡಿದ ಮಾಹಿತಿಯಂತೆ, ರವಿಕುಮಾರ್ ಅವರಿಗೆ ಮಾರುತಿ ಆತ್ಮೀಯರಾಗಿದ್ದರು. ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಮಾರುತಿಯವರೇ ರವಿಕುಮಾರ್ ಅವರನ್ನು ಪರಿಚಯಿಸಿಕೊಟ್ಟಿದ್ದರು. ಮಾರುತಿಯವರೂ ಕೂಡಾ ಮತದಾರರ ಸಮೀಕ್ಷೆಯ ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಮಾರುತಿ ಅವರನ್ನು 2 ದಿನ ವಿಚಾರಣೆ ನಡೆಸಲಾಗಿತ್ತು. ಅವರನ್ನು ಈಗ ಬಂಧಿಸಲಾಯಿತು’ ಎಂದು ತನಿಖಾಧಿಕಾರಿ ತಿಳಿಸಿದರು. ಸಂಸ್ಥೆಗೆ ಸೇರಿದ್ದ 2 ಮೊಬೈಲ್, ಲ್ಯಾಪ್‌ಟಾಪ್ ಹಾಗೂ ದಾಖಲೆಗಳು ಮಾರುತಿ ಮನೆಯಲ್ಲಿ ಸಿಕ್ಕಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಬಿಎಂಪಿ ಮತ್ತಷ್ಟು ವಲಯಗಳ ಅಧಿಕಾರಿಗಳನ್ನು ಬುಧವಾರವೂ ವಿಚಾರಣೆ ನಡೆಸಲಾಯಿತು. ಅಭಿಷೇಕ್ ಎಲ್ಲ ವಲಯಗಳ ಕಂದಾಯ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಸಮೀಕ್ಷೆ, ಹಣಕಾಸು ವ್ಯವಹಾರದಲ್ಲಿ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದರು. ‘ಅಭಿಷೇಕ್‌ನನ್ನು ಬೆಳಗಾವಿಯಲ್ಲಿ ಬಂಧಿಸ ಲಾಯಿತು ಎಂದು ಮೂಲಗಳು ತಿಳಿಸಿವೆ.