ಪ್ರವಾದಿ ನಿಂದನೆ ವಿರುದ್ಧ ರಾಂಚಿಯಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ: ಶೂಟೌಟ್ ಗೆ ಇಬ್ಬರು ಬಾಲಕರು ಮೃತ್ಯು, ಹಲವರಿಗೆ ಗಾಯ

Prasthutha|

ರಾಂಚಿ: ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಂಚಿಯಲ್ಲಿ ಮುಸ್ಲಿಮರು ಶುಕ್ರವಾರ ನಡೆಸಿದ ಪ್ರತಿಭಟನೆಯ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಕನಿಷ್ಠ ಇಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ರಾಂಚಿಯ ರೈನ್ ಮಸ್ಜಿದ್ ಹಿಂದ್ ಪುರಿ ನಿವಾಸಿ ಮುದಸ್ಸರ್ ಆಮ್ (16) ಮತ್ತು ಕರ್ಬಲಾ ಟ್ಯಾಂಕ್ ರಸ್ತೆಯ ಚಿಸ್ತಿ ಮೊಹಲ್ಲಾ ನಿವಾಸಿ ಶಾಹಿಲ್ ಅಫ್ಝಲ್ (15) ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾರೆ.
ರಾಂಚಿಯಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬಳಿಕ ಕರ್ಫ್ಯೂ ಹೇರಲಾಗಿದೆ. ರಾಂಚಿ ಮೈನ್ ರಸ್ತೆಯ ಹನುಮಾನ್ ಮಂದಿರದ ಬಳಿ ಪ್ರತಿಭಟನಕಾರರನ್ನು ತಡೆಯಲು ಯತ್ನಿಸಿದಾಗ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿಭಟನಕಾರರನ್ನು ತಡೆಯಲು ಮೊದಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದರು. ಘಟನೆಯಲ್ಲಿ ಹಲವರು ಪೊಲೀಸರು ಗಾಯಗೊಂಡಿದ್ದಾರೆ. ಈಗ ಪರಿಸ್ಥಿತಿ ತಹಬದಿಗೆ ಬಂದಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

https://twitter.com/NabiyaKhan11/status/1535304362788274176


Join Whatsapp