ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಆಗಿರುವ ಹಲವು ಪ್ರಕರಣಗಳನ್ನು ನಾವು ಕಂಡುಹಿಡಿದಿದ್ದೇವೆ ಎಂಬ ಆಘಾತಕಾರಿ ವಿಷಯವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಎರಡು ಬಾರಿ ಬಿಲ್ ಆಗಿ ಹೆಚ್ಚುವರಿ ಪಾವತಿ ಮಾಡಲಾಗಿರುವ ಪ್ರಕರಣಗಳ ತನಿಖೆಯನ್ನು ಈಗಾಗಲೇ ನಡೆಸಲಾಗುತ್ತಿದೆ. ಎರಡು ಬಾರಿ ಹಣ ಪಡೆದಂತಹ ಏಜೆನ್ಸಿಗಳಿಂದ, ಅವುಗಳ ಮುಂದಿನ ಕಾಮಗಾರಿಗಳ ಬಿಲ್‌ನಲ್ಲಿ ಕಡಿತ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂದು ಅವರು ಹೇಳಿದರು.
2021ರ ಮಾರ್ಚ್ ಮತ್ತು ಜುಲೈ ನಡುವೆ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ‘ಕೋವಿಡ್ ಕೇರ್ ಸೆಂಟರ್’ ಸೌಲಭ್ಯಗಳಿಗಾಗಿ ಬೆಂಗಳೂರು ದಕ್ಷಿಣ ವಲಯದ ಆರೋಗ್ಯ ಅಧಿಕಾರಿಯವರು ರಾಜ ಎಂಟರ್‌ಪ್ರೈಸಸ್ ಏಜೆನ್ಸಿಗೆ ₹1.50 ಕೋಟಿ ಬಿಡುಗಡೆ ಮಾಡಿದ್ದರು. ಬಿಬಿಎಂಪಿ ಕೇಂದ್ರ ಯೋಜನೆ ವಿಭಾಗದ ದಕ್ಷಿಣ ವಲಯದಿಂದಲೂ ₹1.51 ಕೋಟಿಯನ್ನು ಅದೇ ಏಜೆನ್ಸಿಗೆ, ಅದೇ ಸೌಲಭ್ಯಗಳಿಗಾಗಿ 2021ರ ಮಾರ್ಚ್ ಮತ್ತು ಆಗಸ್ಟ್ ನಡುವೆ ಬಿಡುಗಡೆ ಮಾಡಿದ್ದರು. ಈ ಪ್ರಕರಣವನ್ನು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿ, ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿತ್ತು.
ಕೋವಿಡ್ ಕೇರ್ ಸೆಂಟರ್’ ಸೌಲಭ್ಯಗಳಿಗಾಗಿ ಎರಡು ಬಾರಿ ಹಣ ಬಿಡುಗಡೆ ಮಾಡಿರುವ ಆರೋಗ್ಯ ಅಧಿಕಾರಿ ಹಾಗೂ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.