ನವದೆಹಲಿ: ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ನಿರ್ಮಾಣದ ಸಾಕ್ಷ್ಯಚಿತ್ರದಿಂದ ಕಾಳಿ ಪೋಸ್ಟರ್ ಅನ್ನು ಟ್ವಿಟ್ಟರ್ ಸಂಸ್ಥೆ ತೆಗೆದು ಹಾಕಿದೆ.
ಕಾಳಿ ಪೋಸ್ಟರ್ ಮೂಲಕ ಹಿಂದೂ ದೇವತೆಗೆ ಅಪಮಾನ ಮಾಡಲಾಗಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಟ್ವಿಟ್ಟರ್ ಈ ಕ್ರಮ ತೆಗೆದುಕೊಂಡಿದೆ.
ಜುಲೈ 2ರಂದು ಕಾಳಿ ಸಾಕ್ಷ್ಯಚಿತ್ರದ ಪೋಸ್ಟರನ್ನು ಲೀನಾ ಅವರು ಟ್ವೀಟ್ ಮಾಡಿದ್ದು, ಅದರಲ್ಲಿ ಕಾಳಿ ದೇವತೆಯನ್ನು ಸಿಗರೇಟ್ ಸೇದುತ್ತಿರುವ ಮತ್ತು ಕೈಯಲ್ಲಿ LGBTQ ಸಮುದಾಯಕ್ಕೆ ಸೇರಿದ ಧ್ವಜವನ್ನು ಹಿಡಿದ ಶೈಲಿಯಲ್ಲಿ ಬಿಂಬಿಸಲಾಗಿತ್ತು.
ಈ ನಿಟ್ಟಿನಲ್ಲಿ ಆಕೆಯ ವಿರುದ್ಧ ಕಾನೂನು ಕ್ರಮಕ್ಕೆ ವ್ಯಾಪಕ ಒತ್ತಡ ಬಂದ ಹಿನ್ನೆಲೆಯಲ್ಲಿ ಭಾರತದಲ್ಲಿ ಲೀನಾ ಮಣಿಮೇಕಲೈ ಅವರ ಟ್ವೀಟ್ ಅನ್ನು ತೆಗೆದು ಹಾಕಲಾಗಿದೆ. ಟ್ವಿಟ್ಟರ್ ಈ ಅಂಶಗಳನ್ನು ಅಳಿಸಿ ಹಾಕಿರುವ ಸಮಯದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಕಾಳಿ ದೇವತೆಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮಣಿಮೇಕಲೈ ವಿರುದ್ಧ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.