ಕೇಂದ್ರ V/S ಟ್ವಿಟರ್‌ | ನೂತನ ಕಾನೂನು ಪಾಲಿಸದ ಟ್ವಿಟರ್‌ ಗೆ ಕೇಂದ್ರದ ಕೊನೆಯ ಎಚ್ಚರಿಕೆ ನೋಟಿಸ್

Prasthutha|

ನವದೆಹಲಿ : ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಪಾಲನೆ ಕುರಿತಂತೆ ಕೇಂದ್ರ ಸರಕಾರ ಮತ್ತು ಟ್ವಿಟರ್‌ ನಡುವಿನ ತಿಕ್ಕಾಟ  ಇನ್ನಷ್ಟು ಬಿರುಸುಗೊಂಡಿದೆ. ಹೊಸ ನಿಯಮಗಳ ಪಾಲನೆ ಕುರಿತಂತೆ ಕೇಂದ್ರ ಸರಕಾರ ಟ್ವಿಟರ್‌ ಗೆ ಶನಿವಾರ ಅಂತಿಮ ನೋಟಿಸ್‌ ಜಾರಿ ಮಾಡಿದೆ.

ನೂತನ ನಿಯಮಗಳನ್ನು ಪಾಲಿಸಲು ಟ್ವಿಟರ್‌ ನಿರಾಕರಿಸಿರುವುದು ಮೈಕ್ರೊಬ್ಲಾಗಿಂಗ್‌ ಜಾಲತಾಣದ ಬದ್ಧತೆಯ ಕೊರತೆಯಾಗಿದೆ. ಅಲ್ಲದೆ ನೂತನ ಕಾಯ್ದೆ ಪಾಲಿಸುವ ಬಗ್ಗೆ ಟ್ವಿಟರ್‌ ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

- Advertisement -

ಈ ಬಗ್ಗೆ ಟ್ವಿಟರ್‌ ನ ಡೆಪ್ಯುಟಿ ಜನರಲ್‌ ಸಲಹೆಗಾರ ಜಿಮ್‌ ಬೇಕರ್‌ ಗೆ ಪತ್ರ  ಬರೆಯಲಾಗಿದೆ ಎಂದು ಅದು ತಿಳಿಸಿದೆ.

ನೂತನ ಕಾಯ್ದೆಯ ಪ್ರಕಾರ ಟ್ವಿಟರ್‌ ಸಂಸ್ಥೆ ನಾಮನಿರ್ದೇಶನ ಮಾಡಿರುವ ರೆಸಿಡೆಂಟ್‌ ಅಧಿಕಾರಿ ಮತ್ತು ನೋಡಲ್‌ ಕಾಂಟ್ಯಾಕ್ಟ್‌ ಪರ್ಸನ್‌ ಟ್ವಿಟರ್‌ ಸಂಸ್ಥೆಯ ಉದ್ಯೋಗಿಗಳಲ್ಲ. ಅಲ್ಲದೆ ಅವರು ನೀಡಿರುವ ಕಚೇರಿ ವಿಳಾಸ ಕೂಡ ಟ್ವಿಟರ್‌ ಸಂಸ್ಥೆಯದ್ದಲ್ಲ. ಇದು ಭಾರತದ ಐಟಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಹೊಸ ಕಾನೂನು ಇತ್ತೀಚೆಗೆ ಜಾರಿಗೊಂಡಿದೆ. ನೂತನ ಕಾಯ್ದೆ ಜಾರಿಗೊಂಡು ಒಂದು ವಾರವಾದರೂ, ಟ್ವಿಟರ್‌ ಸಂಸ್ಥೆ ಈ ಕಾಯ್ದೆ ಪಾಲಿಸಲು ನಿರಾಕರಿಸಿದೆ ಎಂದು ನೋಟಿಸ್‌ ನಲ್ಲಿ ತಿಳಿಸಲಾಗಿದೆ.

ಒಂದು ವೇಳೆ ಸಂಸ್ಥೆಯು ನೂತನ ಕಾಯ್ದೆ ಪಾಲಿಸಲು ನಿರಾಕರಿಸಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಪ್ರಕಾರ, ಹೊಣೆಗಾರಿಕೆಯಿಂದ ನೀಡಲಾಗುವ ವಿನಾಯ್ತಿಯನ್ನು ಟ್ವಿಟರ್‌ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

- Advertisement -