ನವದೆಹಲಿ : ಆಡಳಿತಾರೂಢ ಬಿಜೆಪಿ ಬೆಂಬಲಿಗ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ನ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಐವರು ಪ್ರಮುಖರ ಟ್ವಿಟರ್ ಖಾತೆಗಳ ಬ್ಲೂಟಿಕ್ ಕೂಡ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಲ್ಲಿನ ಬ್ಲೂಟಿಕ್ ಕಾಣೆಯಾದ ಬಗ್ಗೆ ಸುದ್ದಿಯಾದ ಬೆನ್ನಲ್ಲೇ, ಇದೀಗ ಐವರು ಆರೆಸ್ಸೆಸ್ ಪ್ರಮುಖರ ಟ್ವಿಟರ್ ಖಾತೆಗಳಲ್ಲೂ ಬ್ಲೂಟಿಕ್ ಮಾಯವಾಗಿರುವ ಬಗ್ಗೆ ತಿಳಿದುಬಂದಿದೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರಮುಖರಾದ ಸುರೇಶ್ ಸೋನಿ, ಅರುಣ್ ಕುಮಾರ್, ಸುರೇಶ್ ಜೋಶಿ, ಕೃಷ್ಣ ಕುಮಾರ್ ಮುಂತಾದವರ ಟ್ವಿಟರ್ ಖಾತೆಯ ಬ್ಲೂಟಿಕ್ ಮಾಯವಾಗಿದೆ.
ಟ್ವಿಟರ್ ನಿಯಮಗಳ ಪ್ರಕಾರ, ಆರು ತಿಂಗಳ ವರೆಗೆ ಟ್ವಿಟರ್ ಖಾತೆಯನ್ನು ಬಳಸದಿದ್ದರೆ, ಅದನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ವೆರಿಫಿಕೇಶನ್ ಸ್ಟೇಟಸ್ ರದ್ದಾಗುತ್ತದೆ ಎಂದು ತಿಳಿದುಬಂದಿದೆ.
ಸೋಶಿಯಲ್ ಮೀಡಿಯಾ ವೇದಿಕೆಗಳ ನಿಯಂತ್ರಣಕ್ಕಾಗಿ ಸರಕಾರ ತಂದಿರುವ ಹೊಸ ಕಾನೂನು ತಂದ ಬಳಿಕ, ಸರಕಾರ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ನಡುವೆ ಸಂಘರ್ಷ ಆರಂಭವಾಗಿರುವ ಸಮಯದಲ್ಲಿ ಟ್ವಿಟರ್ ನಲ್ಲಾದ ಈ ಬದಲಾವಣೆಗಳು ಚರ್ಚಾಸ್ಪದವಾಗಿವೆ. ನಾಯ್ಡು ಅವರ ಖಾತೆಯ ಬ್ಲೂಟಿಕ್ ಕಾಣೆಯಾದ ಬೆನ್ನಲ್ಲೇ ಉಂಟಾದ ಚರ್ಚೆಯಿಂದಾಗಿ ಎರಡು ಗಂಟೆಗಳಲ್ಲಿ, ಆ ಖಾತೆಯ ಬ್ಲೂಟಿಕ್ ಮರುಸ್ಥಾಪಿಸಲಾಗಿದೆ.