ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತಿದೆ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು

Prasthutha|

ಬೆಂಗಳೂರು: ಮಾಜಿ ಸಿ.ಎಂ. ಹೆಚ್​.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀವು ನನ್ನ ವಿರುದ್ಧ ಮಾಡುತ್ತಿರುವ ವೈಯಕ್ತಿಕ ಮಟ್ಟದ ಆರೋಪಗಳು, ಭಾಷೆ ಗಮನಿಸಿದರೆ ಸೋಲಿನ ಆಘಾತದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ಶೀಘ್ರವಾಗಿ ಗುಣಮುಖರಾಗಿ ಎಂದಷ್ಟೇ ನಾನು ಹಾರೈಸಬಲ್ಲೆ ಎಂದಿದ್ದಾರೆ.

- Advertisement -

ನೀವು ಪ್ರಸ್ತಾಪಿಸಿರುವ ಶಾಸಕರ ಪತ್ರದ ನಕಲಿ ಮತ್ತು ಅಸಲಿ ವಿಚಾರದ ಬಗ್ಗೆ ತನಿಖೆ ನಡೆಸಲಾಗುವುದು. ಈ ಬಗ್ಗೆ ಶೀಘ್ರದಲ್ಲೇ ತನಿಖೆಯಿಂದ ಹೊರಬೀಳಲಿದೆ ಎಂದು ಸಿದ್ದರಾಮಯ್ಯ ಹೇಳಿದರು. ಪತ್ರ ವೈರಲ್ ಆದ ನಂತರ ಶಾಸಕರು ಇದು ನಕಲಿ ಪತ್ರ ಎಂದು ಹೇಳಿಕೆ ನೀಡುತ್ತಿದ್ದ ಬಗ್ಗೆ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಟೀಕಿಸಿದ್ದರು.

ನಿಮ್ಮ ಸಚಿವರ ವಿರುದ್ಧ ನಿಮ್ಮ ಕಾಂಗ್ರೆಸ್ ಶಾಸಕರೇ ಬರೆದ ಪತ್ರವನ್ನೇ ನಕಲಿ ಎಂದು ಬಿಂಬಿಸಿದ ‘ನಕಲಿರಾಮ’ನ ಉಪ್ಪುಹುಳಿ ಖಾರದ ಬಗ್ಗೆ ನನಗೆ ಗೊತ್ತಿಲ್ಲದ್ದೇನಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಉಗಿದು ಉಪ್ಪಾಕಿದ ಮೇಲೆ ಆ ನಕಲಿ ಪತ್ರ ‘ಅಸಲಿ’ಯಾದ ಕಥೆಯ ಹಕೀಕತ್ತು ಏನಿರಬಹುದು ಸಿಎಂ ಸಾಹೇಬರೇ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

- Advertisement -

ಕುಮಾರಸ್ವಾಮಿ ವಿರುದ್ಧ ವ್ಯಂಗ್ಯ ಪೋಸ್ಟರ್

ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆ ಗೈಯುತ್ತಿರುವ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಸಿಎಂ ಆಫ್ ಕರ್ನಾಟಕ ಎಂಬ ಫೇಸ್​ಬುಕ್ ಖಾತೆಯಲ್ಲಿ ವ್ಯಂಗ್ಯದ ಪೋಸ್ಟ್ ಮಾಡಲಾಗಿದೆ. ಮಗುವಿನ ಚಿತ್ರಕ್ಕೆ ಕುಮಾರಸ್ವಾಮಿ ಫೋಟೋ ಹಾಕಿ ವ್ಯಂಗ್ಯವಾಗಿ ಪೋಸ್ಟ್ ಹಾಕಲಾಗಿದೆ.

ಪೋಸ್ಟ್ ಒಂದರಲ್ಲಿ “ಸಾಂದರ್ಭಿಕ ಶಿಶು ಚೈಲ್ಡ್ ಕುಮಾರ” ಎಂದು ಬರೆಯಲಾಗಿದ್ದು, ಹಿಟ್ ಆ್ಯಂಡ್ ರನ್ ಆರೋಪ ಮಾಡುವುದರಲ್ಲಿ ಕುಮಾರನಿಗೆ ಕುಮಾರನೇ ಸಾಟಿ ಎಂದು ಬರೆಯಲಾಗಿದೆ. “ಚೈಲ್ಡ್ ಕುಮಾರ, ಕೈಗೆ ಸಿಕ್ಕಿದ್ದೆಲ್ಲ ಡಮಾರು” ಎಂಬ ಪೋಸ್ಟ್​ನಲ್ಲಿ, ಸಿಎಂ ಕುರ್ಚಿ ಸಿಗದ ಹತಾಶ ಸಾಂದರ್ಭಿಕ ಶಿಶುವಿನ ಹುರುಳಿಲ್ಲದ ಆರೋಪಗಳಿಗೆ ಕೊನೆಯಿದ್ದಂತೆ ಕಾಣುತ್ತಿಲ್ಲ ಎಂದು ಬರೆಯಲಾಗಿದೆ.

Join Whatsapp