ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು: ಮೊಯ್ದೀನ್ ಬಾವಾ

Prasthutha|

►ಜನವರಿ 29ರಿಂದ ಫೆಬ್ರವರಿ 2ರವರೆಗೆ ಪತ್ರ ಚಳುವಳಿ

- Advertisement -


ಮಂಗಳೂರು: ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಘೊಷಣೆ ಮಾಡಬೇಕು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಮಾಜಿ ಶಾಸಕ ಮೊಯ್ದೀನ್ ಬಾವಾ ಒತ್ತಾಯ ಮಾಡಿದ್ದಾರೆ.


ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನವರಿ 29ರಿಂದ ಫೆಬ್ರವರಿ 2ರವರೆಗೆ ಪತ್ರ ಚಳುವಳಿ ನಡೆಸಲು ತೀರ್ಮಾನಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿಯವರಿಗೆ Indian post registered post ಮೂಲಕ ಪತ್ರ ಬರೆಯಲಾಗುತ್ತದೆ. ಈ ಚಳುವಳಿಯಲ್ಲಿ ಕರಾವಳಿಯ ತುಳುವರು, ಮಲೆನಾಡಿನ ತುಳುವರು, ಹೊರರಾಜ್ಯಗಳಲ್ಲಿರುವ ತುಳುವರು, ಎಲ್ಲಾ ಸಂಘಸಂಸ್ಥೆಗಳು ಚಳುವಳಿಯಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾರೆ.

- Advertisement -


ತುಳುನಾಡಿನ ಪ್ರತಿಯೊಬ್ಬರು ಈ ಚಳುವಳಿಯಲ್ಲಿ ಭಾಗಿಯಾಗಿ, ಕನಿಷ್ಠ 10 ಸಾವಿರ ರಿಜಿಸ್ಟರ್ ಪೋಸ್ಟ್ ಮನವಿ ಪತ್ರಗಳನ್ನು ತಲುಪಿಸಲು ಯೋಜನೆ ರೂಪಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದರು.


ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು 2014ರಲ್ಲಿ ವಿಧಾನಸಭೆಯಲ್ಲಿ ಹಕ್ಕೊತ್ತಾಯ ಮಾಡಿದ್ದೆ. ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತಾಡಿದ ಶಾಸನ ಸಭೆಯಲ್ಲಿ ತುಳು ಭಾಷೆಯ ಕಂಪು ಹರಡಿದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಧನ್ಯವಾದ. ತುಳುನಾಡಿನ ಶಾಸಕ ಇಂದು ಸ್ಪೀಕರ್ ಆಗಿದ್ದಾರೆ, ಅಧಿವೇಶನದಲ್ಲಿ ತುಳುವಿನಲ್ಲಿ ಮಾತಾಡಿದ್ದಾರೆ, ಅವಾಗ ಅದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು, ಇನ್ಮುಂದೆ ಆ ಥರ ಆಗಬಾರದು, ತುಳುವಿಗೆ ಅಧಿಕೃತ ಮಾನ್ಯತೆ ಸಿಗಬೇಕು ಎಂದರು.

ತುಳುವರು ಹಾಲಿವುಡ್, ಬಾಲಿವುಡ್ ನಲ್ಲಿದ್ದಾರೆ. ರಾಜಕೀಯ ರಂಗದಲ್ಲೂ ತುಳುವರು ಸಾಧನೆ ಮಾಡಿದ್ದಾರೆ. ಮುಂಬೈನಲ್ಲಿ ಮೂವರು ಶಾಸಕರು, ಒಬ್ರು ಎಂಪಿ ಒಬ್ಬರು ಕ್ಯಾಬಿನೆಟ್ ಸಚಿವರು ತುಳುವರು. ಕೈಗಾರಿಕಾ ವಲಯದಲ್ಲೂ ತುಳುವರ ಸಾಧನೆ ಅಪಾರ. ಹೊರದೇಶಗಳಲ್ಲಿ, ಗಲ್ಫ್ದೇಶಗಳಲ್ಲೂ ತುಳುವರು, ದೊಡ್ಡ ದೊಡ್ಡ ಉದ್ದಿಮೆ ಸ್ಥಾಪಿಸಿದ್ದಾರೆ. ವೈದ್ಯಕೀಯ ರಂಗದಲ್ಲೂ ತುಂಬಾ ಮಂದಿ ಪ್ರಸಿದ್ಧ ತುಳುವ ವೈದ್ಯರಿದ್ದಾರೆ. ಹಲವು ಬ್ಯಾಂಕುಗಳು, ಆಸ್ಪತ್ರೆಗಳು, ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸಿದ ಹಿರಿಮೆ ತುಳುವರದ್ದು ಎಂದು ಹೇಳಿದ್ದಾರೆ.


ತುಳು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ್ ಕತ್ತಲ್ ಮಾತನಾಡಿ, ಈ ಹಿಂದೆಯೂ ಇಂತಹ ಹೋರಾಟ ನಡೆದಿತ್ತು, ಇದು ಮುಂದಿನ ಹಂತದ ಹೋರಾಟ. ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಬಗ್ಗೆ ತುಳು ಅಕಾಡೆಮಿ ಮೂಲಕ ಈ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ, ಮೋಹನ್ ಆಳ್ವ ಸಮಿತಿಗಳಿಗೆ ಕೂಡ ವರದಿ ಸಲ್ಲಿಸಿದೆ, ಅದಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದರು.
ತುಳು ಅಕಾಡೆಮಿ ಸ್ಥಗಿತಗೊಂಡಿದ್ದು, ಸದ್ಯ ತುಳುವಿನ ಎಲ್ಲಾ ಕೆಲಸಗಳು ಸ್ಥಗಿತಗೊಂಡಿದೆ. ಸರ್ಕಾರ ಶೀಘ್ರವಾಗಿ ತುಳು ಅಕಾಡೆಮಿಗೆ ಸಮರ್ಥ ಅಧ್ಯಕ್ಷರನ್ನು ನೇಮಕ ಮಾಡಬೇಕು. ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚಿನ ಭಾಷೆಗಳು ಅಧಿಕೃತ ಭಾಷೆ ಆಗಿದೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ಸಿಗಬೇಕು. ತುಳು ಭಾಷೆಯನ್ನು ಕೇಂದ್ರದಲ್ಲಿ 8ನೇ ಪರಿಚ್ಛೇದಕ್ಕೆ ಸೇರಬೇಕು. ತುಳುವಿಗೆ ಸಾವಿರದ ನೂರಿ ವರ್ಷಗಳ ಇತಿಹಾಸ ಇದೆ, ತುಳು ಭಾಷೆಗೆ ಸ್ವತಂತ್ರ ಲಿಪಿ ಕೂಡ ಇದೆ, ತುಳುವಿನಲ್ಲಿ 54 ಶಿಲಾ ಶಾಸನಗಳು ದೊರೆತಿದೆ.ಅಧಿಕೃತ ಭಾಷೆಯಾಗಬೇಕಾದ ಎಲ್ಲಾ ಅರ್ಹತೆಗಳನ್ನು ತುಳು ಭಾಷೆ ಹೊಂದಿದೆ ಎಂದರು.


ತುಳು ಚಿತ್ರರಂಗದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿದ, ಜನಪ್ರತಿನಿಧಿಗಳು ಮತ್ತು
ನಾಯಕರಿಗೆ ಇಚ್ಛಾ ಶಕ್ತಿ ಇದ್ದರೆ ತುಳು ಭಾಷೆಗೆ ಮಾನ್ಯತೆ ಸಿಗಲಿದೆ. ನಾಯಕರು ನಮ್ಮ ಬೇಡಿಕೆ ಪೂರೈಸದಿದ್ದರೆ ಅವರ ಮಾತುಗಳಿಗೆ ಚಪ್ಪಾಳೆ ತಟ್ಟುವುದನ್ನು ನಾವು ನಿಲ್ಲಿಸಬೇಕು. ಈ ಹೋರಾಟಕ್ಕೆ ತುಳು ಕಲಾವಿದರ ಬೆಂಬಲ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದರು.


ಸುದ್ದಿಗೋಷ್ಠಿಯಲ್ಲಿ ತುಳು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ದಯಾನಂದ್ ಕತ್ತಲ್, ತುಳು ಚಿತ್ರರಂಗದ ವಿಜಯ್ ಕುಮಾರ್ ಕೊಡಿಯಾಲ್‌ ಬೈಲ್, ತುಳು ಹೋರಾಟಗಾರ ಶೈಲೇಶ್, ಹೆಜಮಾಡಿಯ ಹೆಚ್.ಕೆ ಷರೀಫ್ ಉಪಸ್ಥಿತರಿದ್ದರು.



Join Whatsapp