ಮಂಗಳೂರು: ಕಳೆದ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸೋತು ಹೋದರೂ ಟ್ರಂಪಿಯಿಸಂ ಹೋಗಿಲ್ಲ. ಅದೊಂದು ಕಾಯಿಲೆ ಎಂದು ಅಮೆರಿಕಾದಲ್ಲಿ ವೈದ್ಯರಾಗಿರುವ ಖ್ಯಾತ ಪ್ರಗತಿಪರ ಚಿಂತಕ ಡಾ.ಅಮರ್ ಕುಮಾರ್ ಹೇಳಿದ್ದಾರೆ.
ಅವರು ಮಂಗಳೂರು ಸಮಾನ ಮನಸ್ಕರು ಸಂಘಟನೆಯ ಆಶ್ರಯದಲ್ಲಿ ಜರುಗಿದ ಟ್ರಂಪೋತ್ತರ ಕಾಲಘಟ್ಟದ ಬದಲಾದ ಅಮೇರಿಕಾ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಇಡೀ ಜಗತ್ತನ್ನೇ ಆಳುವ ಶಕ್ತಿ ಹೊಂದಿದ್ದ ಅಮೆರಿಕಾದ ಶಕ್ತಿ ಕುಗ್ಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಹಳಷ್ಟು ಯೋಜನಾಬದ್ದವಾಗಿ, ಲೆಕ್ಕಾಚಾರದ, ಬಲಿಷ್ಠ ಮತ್ತು ದೂರಗಾಮಿ ಕಣ್ಣೋಟದಲ್ಲಿ ಬೆಳೆಯುತ್ತಿರುವ ಚೀನಾ ದೇಶದ ಆರ್ಥಿಕತೆ ಒಂದೆಡೆಯಾದರೆ ಅಮೆರಿಕಾದ ಹಿತ್ತಿಲು ಪ್ರದೇಶವಾದ ಲ್ಯಾಟಿನ್ ಅಮೇರಿಕಾದ 15 ದೇಶಗಳಲ್ಲಿ ಈಗಾಗಲೇ 9 ದೇಶಗಳಲ್ಲಿ ಎಡಪಂಥೀಯ ಸರಕಾರಗಳು ಅಸ್ತಿತ್ವಕ್ಕೆ ಬಂದಿರುವುದು ಕಾರಣವಾಗಿದೆ. ಅಮೇರಿಕಾ ಆಂತರಿಕವಾಗಿಯೂ ಕುಸಿಯುತ್ತಿದೆ. ಅಲ್ಲಿ ಪರಸ್ಪರ ವಿಭಜನೆಯ ಕಂದಕಗಳು ತೀವ್ರವಾಗುತ್ತಿದೆ. ಕರಿಯರ ಬಿಳಿಯರ ಮಧ್ಯೆ, ನಗರ ಗ್ರಾಮಾಂತರ ಮಧ್ಯೆ, ಬಡವ ಶ್ರೀಮಂತರ ಮಧ್ಯೆ ಅಂತರ ಜಾಸ್ತಿಯಾಗಿದ್ದು ಪರಸ್ಪರ ಅವಿಶ್ವಾಸ ಅಪನಂಬಿಕೆಗಳು ಒಂದೇ ಸಮನೆ ಬೆಳೆಯುತ್ತಿದೆ ಎಂದು ಹೇಳಿದರು.
ಕ್ರಿಮಿನಲಿಸಂ ಸಾಮಾಜಿಕ ಮೌಲ್ಯವಾಗಿದೆ. ಗನ್ ಗಳು ಎಲ್ಲವನ್ನೂ ನಿರ್ಧರಿಸುತ್ತದೆ. ಡ್ರಗ್ಸ್ ಮತ್ತಿತರ ಮಾದಕ ದ್ರವ್ಯಗಳು ಸಾಮಾಜಿಕ ಸ್ವಾಸ್ಥ್ಯ ಮತ್ತು ಮಾನಸಿಕ ಆರೋಗ್ಯವನ್ನು ಏರುಪೇರು ಮಾಡಿದೆ. ಕರಿಯರ ಮೇಲಿನ ದೌರ್ಜನ್ಯ, ಅಮೆರಿಕೇತರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯದ ಮಾತಾಗಿದೆ. ಆದರೂ ಅಮೆರಿಕಾ ಮಾನವ ಹಕ್ಕಿನ ಪ್ರತಿಪಾದಕ ಎಂದು ಪ್ರಚಾರ ಗಿಟ್ಟಿಸುತ್ತಿದೆ. ಅಮೆರಿಕಾದಲ್ಲಿ ನ್ಯಾಯಕ್ಕಾಗಿ ಕಾನೂನು ಇಲ್ಲ, ಅನ್ಯಾಯಕ್ಕಾಗಿ ಕಾನುನುಗಳಿವೆ. ನ್ಯಾಯವನ್ನು ಅನ್ಯಾಯಯುತವಾಗಿ ದುಡ್ಡಿದ್ದವರು ಕ್ರಯಕ್ಕೆ ಪಡೆಯುವಂತೆ ಪಡೆಯಬಹುದು ಎಂದು ಅವರು ಹೇಳಿದರು
ಚೀನಾದ ಮೇಲೆ ಗುರಾಣಿಯನ್ನಾಗಿ ಭಾರತವನ್ನು ಉಪಯೋಗಿಸುವ ಹುನ್ನಾರ ನಡೆದಿದೆ. ಅಮೆರಿಕಾದ ದ್ವಿಮುಖ ಧೋರಣೆಯ ಬಗ್ಗೆ ಪಾಕಿಸ್ತಾನ ಭಾರತಕ್ಕಿಂತ ಹೆಚ್ಚಿನ ಪರಿಜ್ಞಾನ ಹೊಂದಿದೆ. ಲಾಭ, ಸ್ವಾರ್ಥ, ಹಿಂಸೆ, ಸುಳ್ಳುಗಳ ಮೇಲೆ ಬಲಪಂಥೀಯ ವ್ಯವಸ್ಥೆ ನಡೆಯುತ್ತಿದ್ದು, ಸಾಮ್ರಾಜ್ಯಶಾಹಿಯ ರಕ್ತದಾಹವನ್ನು ಜನ ಒಗ್ಗಟ್ಟಾಗಿ ಪ್ರತಿಭಟಿಸಬೇಕೆಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸಮುದಾಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ವಹಿಸಿದ್ದರು. DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮಿತಿಯ ರಾಜ್ಯ ನಾಯಕರ ಡಾ.ಕ್ರಷ್ಣಪ್ಪ ಕೊಂಚಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂವಾದದಲ್ಲಿ ಪ್ರಗತಿಪರ ಚಿಂತಕರಾದ ಪ್ರೋ.ನರೇಂದ್ರ ನಾಯಕ್,ಶ್ಯಾಮಸುಂದರ್ ರಾವ್, ಪ್ರಭಾಕರ ಕಾಪಿಕಾಡ್, ವಿದ್ದು ಉಚ್ಚಿಲ್,ಶಿವಾನಂದ ಕೋಡಿ,ರಮೇಶ್ ಉಳ್ಳಾಲ್, ಎಂ.ದೇವದಾಸ್,ಯಾದವ ಶೆಟ್ಟಿ, ಸುಕುಮಾರ್,ಸುನಿಲ್ ಕುಮಾರ್ ಬಜಾಲ್, ಇಮ್ತಿಯಾಜ್,ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು ಮೊದಲಾದವರು ಭಾಗವಹಿಸಿದ್ದರು.