ಕಾರಿಗೆ ಲಾರಿ ತಗುಲಿದ ಆರೋಪ: ಲಾರಿ ಚಾಲಕನಿಗೆ ತೀವ್ರ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ

Prasthutha|

ಚಿಕ್ಕಮಗಳೂರು: ಕಾರಿಗೆ ಲಾರಿ ತಗುಲಿದೆ ಎಂದು ಆರೋಪಿಸಿ ಪೊಲೀಸ್ ಸಿಬ್ಬಂದಿ ಲಾರಿ ಚಾಲಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಬಣಕಲ್ ಬಳಿ ನಡೆದಿದ್ದು, ತೀವ್ರ ಗಾಯಗೊಂಡ ಚಾಲಕ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಪುತ್ತೂರಿಂದ 15 ಕಿ.ಮೀ.ದೂರದ ಮಾಣಿ-ಮೈಸೂರು ರಸ್ತೆಯ ಮಾಡ್ನೂರು ಗ್ರಾಮದ ಕಾವು ಪರನೀರು ಮನೆ ನಿವಾಸಿ ಜಗನ್ನಾಥ್ ಹಲ್ಲೆಗೊಳಗಾದವರು.

ಜಗನ್ನಾಥ್ ಅವರು ಮಂಗಳೂರಿನಿಂದ ಟ್ಯಾಂಕರ್ ನಲ್ಲಿ ತೈಲ ತುಂಬಿಸಿ ಬಳ್ಳಾರಿಗೆ ಮೂಡಿಗೆರೆ ಮೂಲಕ ಹೋಗುತ್ತಿದ್ದಾಗ ಚಕಮಕಿ ಎಂಬಲ್ಲಿ ಕಾರೊಂದಕ್ಕೆ ಟ್ಯಾಂಕರ್ ತಗುಲಿದೆ. ತಕ್ಷಣ ಕಾರಿನಿಂದ ಇಳಿದ ಮೂವರು ಏಕಾಏಕಿ ಟ್ಯಾಂಕರ್ ಚಾಲಕ ಜಗನ್ನಾಥ್ ಅವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ.

- Advertisement -

“ನನ್ನದು ಯಾವುದೇ ತಪ್ಪು ಇಲ್ಲದಿದ್ದರೂ ಅವರು ಮುಖ, ಕೈ, ಕಾಲುಗಳಿಗೆ ತೀವ್ರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದರು. ಅಷ್ಟರಲ್ಲಿ ಸ್ಥಳೀಯರು ಆಗಮಿಸಿ ನನ್ನ ಪ್ರಾಣ ಉಳಿಸಿದ್ದಾರೆ. ಲಾರಿ ಚಾಲಕರ ಸಂಘದವರು ಕೂಡ ತಕ್ಷಣ ಬಂದು ನನ್ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಬೇಕು. ಕಾರಿನಲ್ಲಿದ್ದವರು ಪೊಲೀಸರು ಎಂಬುದು ನನಗೆ ಮತ್ತೆ ಗೊತ್ತಾಯಿತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗನ್ನಾಥ್ ಹೇಳಿದ್ದಾರೆ.

ಮನೆಯಲ್ಲಿ ಚಿಕ್ಕ ಮಕ್ಕಳಿವೆ. ನಾನೊಬ್ಬನೇ ದುಡಿಯುವವನು. ಇನ್ನು ಮುಂದೆ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆಯೇ ಎಂಬ ಆತಂಕ ನನ್ನನ್ನು ಕಾಡುತ್ತಿದೆ ಎಂದು ಮಂಜುನಾಥ್ ಹೇಳಿದ್ದಾರೆ.

ಹಲ್ಲೆ ನಡೆಸಿದ ಸಿಬ್ಬಂದಿ ಬಾಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಎಂಬುದು ತಿಳಿದುಬಂದಿದೆ. ಈ ಬಗ್ಗೆ ಗಾಯಾಳು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Join Whatsapp