ತ್ರಿಪುರಾ: ವ್ಯವಸ್ಥಿತ ಹತ್ಯಾಕಾಂಡ

Prasthutha|

ಈಶಾನ್ಯ ರಾಜ್ಯಗಳಲ್ಲಿ ಮುಸ್ಲಿಮರ ಬೇಟೆ ಮುಂದುವರಿದಿದೆ. ಸಂಘಪರಿವಾರದೊಂದಿಗೆ ಇದೀಗ ಸರ್ಕಾರಿ ಯಂತ್ರಗಳು ಕೂಡ ಈ ದುಷ್ಕೃತ್ಯದಲ್ಲಿ ಸಹಭಾಗಿತ್ವ ಹೊಂದಿರುವುದು ಇತ್ತೀಚಿನ ತ್ರಿಪುರಾ ಹಿಂಸಾಚಾರದಲ್ಲಿ ಸಾಬೀತಾಗಿದೆ. ಅಸ್ಸಾಂನಲ್ಲಿ ಒಕ್ಕಲೆಬ್ಬಿಸುವ ನೆಪದಲ್ಲಿ ನಡೆದ ಹಿಂಸಾಚಾರದ ಬಳಿಕ ತ್ರಿಪುರಾ ಮಾರಣಹೋಮ ನಡೆದಿದೆ.

- Advertisement -


ತ್ರಿಪುರಾದಲ್ಲಿ ಮುಸ್ಲಿಂ ವಿರೋಧಿ ಹಿಂಸಾಚಾರಗಳು ಭುಗಿಲೆದ್ದ ಬಳಿಕ ಮುಸ್ಲಿಮರು ಮುಖ್ಯವಾಗಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಭಯದಿಂದ ಜೀವನ ಸಾಗಿಸುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ಹಿಂದೂ ಜಾಗರಣ ಮಂಚ್, ಬಜರಂಗ ದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಘಟಿತವಾಗಿ ನಡೆಸಿದ ಹಿಂಸಾಚಾರದಲ್ಲಿ 15ಕ್ಕೂ ಅಧಿಕ ಮಸೀದಿಗಳು, ನೂರಾರು ಮುಸ್ಲಿಮರ ಮನೆಗಳು, ಅಂಗಡಿ ಮುಂಗಟ್ಟುಗಳು ನಾಶವಾಗಿವೆ. ಸಾವಿರಾರು ಜನರು ನಿರಾಶ್ರಿತರಾಗಿದ್ದು, ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ.
ತ್ರಿಪುರಾ ಹಿಂಸಾಚಾರ ಏಕಾಏಕಿ ಉಲ್ಭಣಿಸಿದ ಘಟನೆಯಲ್ಲ. ವ್ಯವಸ್ಥಿತವಾಗಿ ಪೂರ್ವ ನಿಯೋಜಿತವಾಗಿ ನಡೆಸಿದ ಹತ್ಯಾಕಾಂಡ ಎಂಬುದನ್ನು ಈಗಾಗಲೇ ಅಲ್ಲಿಗೆ ಭೇಟಿ ನೀಡಿದ ಸತ್ಯಶೋಧನಾ ಸಮಿತಿ ಕಂಡುಕೊಂಡಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆದಿದೆ ಎಂಬ ನೆಪವನ್ನಿಟ್ಟು ಸಂಘಪರಿವಾರ ಸಂಘಟನೆಗಳು ತ್ರಿಪುರಾದಲ್ಲಿ ಹಮ್ಮಿಕೊಂಡಿದ್ದ ಜಾಥಾದಲ್ಲಿ ಮುಸ್ಲಿಮರಿಗೆ ಸೇರಿದ ಮನೆ, ಮಸೀದಿ, ಮದ್ರಸ, ಅಂಗಡಿಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚಲಾಗಿದೆ. ಈ ಹಿಂದೆ ಗುಜರಾತ್ ನಲ್ಲಿ ನಡೆದಂತೆ ತ್ರಿಪುರಾದ ಬಿಜೆಪಿ ಸರ್ಕಾರ ಕೂಡ ಹಿಂಸಾಚಾರವನ್ನು ತಡೆಯುವ ಬದಲು ಹಿಂದುತ್ವ ಗಲಭೆಕೋರರನ್ನು ಪ್ರಚೋದಿಸಿದೆ ಎಂಬುದು ಜಗಜ್ಜಾಹೀರಾಗಿದೆ.


ನೆರೆಯ ಬಾಂಗ್ಲಾದೇಶದಲ್ಲಿ ನಡೆದ ಗಲಭೆಯನ್ನು ಮುಂದಿಟ್ಟುಕೊಂಡು ತ್ರಿಪುರಾದ ಪಾಣಿಸಾಗರದಲ್ಲಿ 12 ಮಸೀದಿ ಧ್ವಂಸ, 51 ಕಡೆಗಳಲ್ಲಿ ಮುಸ್ಲಿಮರ ಮೇಲೆ ದಾಳಿ, ಸಿ.ಆರ್‌ ಪಿಎಫ್ ಪಡೆಯಿಂದ ಹಿಂಸಾಚಾರ, ಪವಿತ್ರ ಕುರ್‌ ಆನ್‌ ಗೆ ಬೆಂಕಿ ಹಚ್ಚುವಿಕೆ ಸೇರಿದಂತೆ ವ್ಯಾಪಕ ಹಿಂಸಾಚಾರ ನಡೆಸಲಾಗಿದೆ. ತ್ರಿಪುರಾ ರಾಜ್ಯವು ಬಾಂಗ್ಲಾದೇಶದೊಂದಿಗೆ ಉತ್ತರ, ದಕ್ಷಿಣ ಮತ್ತು ಪಶ್ಚಿಮಕ್ಕೆ 856 ಕಿಮೀ ಗಡಿಯನ್ನು ಹಂಚಿಕೊಂಡಿದೆ. ಪೂರ್ವದಲ್ಲಿ, ಇದು ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೋರಾಂನೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ತ್ರಿಪುರಾದ ಬುಡಕಟ್ಟು ಜನರು ಮತ್ತು ಬಂಗಾಳಿ ಮಾತನಾಡುವ ಜನರ ನಡುವೆ ಜನಾಂಗೀಯ ಸಂಘರ್ಷಗಳು ಈ ಹಿಂದೆ ನಡೆದಿದ್ದರೂ ಧಾರ್ಮಿಕ ಘರ್ಷಣೆಗಳು ಇಲ್ಲಿ ಅಪರೂಪ ಎನ್ನುತ್ತಾರೆ ಅಲ್ಲಿನ ನಿವಾಸಿಗಳು. ಇಲ್ಲಿನ ಮುಸ್ಲಿಮರು, ಹಿಂದೂಗಳು ಅನ್ಯೋನ್ಯವಾಗಿ ಬದುಕುತ್ತಿದ್ದರು.ಇದನ್ನು ಸಹಿಸದ ಸಂಘಪರಿವಾರದವರು ಶಾಂತವಾಗಿದ್ದ ತ್ರಿಪುರಾದಲ್ಲಿ ಅಶಾಂತಿ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂಬುದು ಇಲ್ಲಿನ ನಿವಾಸಿಗಳ ಆರೋಪ.
ತ್ರಿಪುರಾದಲ್ಲಿ ಮುಸ್ಲಿಮರ ಪ್ರಮಾಣವು ಶೇಕಡಾ 8.6ಕ್ಕಿಂತ ಕಡಿಮೆ. ಮುಖ್ಯವಾಗಿ ಉನಕೋಟಿ ಮತ್ತು ಉತ್ತರ ತ್ರಿಪುರಾದಲ್ಲಿ ವಾಸಿಸುವ ಮುಸ್ಲಿಮರು ಈ ಹಿಂಸಾಚಾರದಿಂದ ಸಂತ್ರಸ್ತರಾಗಿದ್ದಾರೆ. ಸಾವಿರಾರು ಜನರು ಮನೆ, ಮಠ ಕಳೆದುಕೊಂಡಿದ್ದಾರೆ. ಮನೆಯಲ್ಲಿದ್ದ ಹಣ, ಚಿನ್ನಾಭರಣವನ್ನು ಸಂಘಪರಿವಾರದ ಕಾರ್ಯಕರ್ತರು ದೋಚಿದ್ದಾರೆ. ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ ಅಥವಾ ಲೂಟಿಗೊಳಗಾಗಿವೆ.

- Advertisement -


ಅಕ್ಟೋಬರ್ 22ರಿಂದ ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಆರಂಭವಾದ ಹಿಂಸಾಚಾರ ಒಂದು ವಾರ ಕಾಲ ಹೊತ್ತಿ ಉರಿದಿತ್ತು. ಪೊಲೀಸರು ಕೂಡ ಗಲಭೆಕೋರರಿಗೆ ಬೆಂಬಲ ನೀಡಿದ್ದರಿಂದ ಹಿಂಸಾಚಾರ ತೀವ್ರಗೊಂಡಿತ್ತು ಎಂಬುದು ಸತ್ಯಶೋಧನೆಯಿಂದ ಬೆಳಕಿಗೆ ಬಂದಿದೆ.
ಹಿಂಸಾಚಾರದ ವಿವರ ಪಡೆಯಲು ತ್ರಿಪುರಾಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ ಸಾಮಾಜಿಕ ಕಾರ್ಯಕರ್ತರು, ಹಿರಿಯ ವಕೀಲರು ಮತ್ತು ಹೋರಾಟಗಾರರು, ಪತ್ರಕರ್ತರ ಮೇಲೆ ಅಲ್ಲಿನ ಸರ್ಕಾರ ಕ್ರೂರ ಯುಎಪಿಎಯಡಿ ಪ್ರಕರಣ ದಾಖಲಿಸಿದೆ. ಎನ್‌ ಸಿ.ಎಚ್.ಆರ್.ಓದ ಅಡ್ವೊಕೇಟ್ ಅನ್ಸಾರಿ ಇಂದೋರಿ ಮತ್ತು ಪಿಯುಸಿಎಲ್ ನ ಅಡ್ವೊಕೇಟ್ ಮುಕೇಶ್ ಕುಮಾರ್ ಸೇರಿದಂತೆ ಹಲವು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತ್ರಿಪುರಾದಲ್ಲಿ ಯುಎಪಿಎ ಅಡಿಯಲ್ಲಿ ಜನರನ್ನು ಬಂಧಿಸುವ ಮೂಲಕ ಸತ್ಯವನ್ನು ಮೌನವಾಗಿಸಲು ಅಲ್ಲಿನ ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರಿ ವ್ಯವಸ್ಥೆಯೇ ಒಂದು ಸಮುದಾಯದ ವಿರುದ್ಧವಿದ್ದಾಗ ಧ್ವನಿ ಎತ್ತ ಬೇಕಾದ ನಾಗರಿಕ ಸಮಾಜ, ವಿಪಕ್ಷಗಳು ಕೂಡ ತ್ರಿಪುರಾ ವಿಷಯದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿರುವುದು ಕಂಡುಬಂದಿಲ್ಲ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒಂದು ಟ್ವೀಟ್ ಮಾಡಿ ಕೈತೊಳೆದುಕೊಂಡಿದ್ದಾರೆ. ಉಳಿದಂತೆ ತಥಾಕಥಿತ ಜಾತ್ಯತೀತ ಪಕ್ಷಗಳು ಮೌನಕ್ಕೆ ಶರಣಾಗಿವೆ.


ಈ ಮಧ್ಯೆ ತ್ರಿಪುರಾ ಹಿಂಸಾಚಾರದ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಜಗತ್ತಿಗೆ ತಿಳಿಸಿದವರ ವಿರುದ್ಧ ಪೊಲೀಸರನ್ನು ಛೂ ಬಿಡಲಾಗಿದೆ. ಸಾಮಾಜಿಕ ಮಾಧ್ಯಮ ಖಾತೆದಾರರ ವಿರುದ್ಧ ಯುಎಪಿಎ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದು, ಹಲವು ಖಾತೆಗಳನ್ನು ರದ್ದು ಮಾಡಲು ಟ್ವಿಟ್ಟರ್, ಫೇಸ್ ಬುಕ್ ಮತ್ತು ಯುಟ್ಯೂಬ್‌ ನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ತ್ರಿಪುರಾದ ಗಲಭೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ನಾಲ್ವರು ಮುಸ್ಲಿಮ್ ವಿದ್ವಾಂಸರು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕರ್ತರನ್ನು ಸುಳ್ಳು ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ. ಅಪಾರ ನಾಶನಷ್ಟಕ್ಕೊಳಗಾದ ತ್ರಿಪುರಾದ ಪಾಣಿಸಾಗರ ಮತ್ತು ಧರ್ಮನಗರಕ್ಕೆ ಭೇಟಿ ನೀಡಲು ತೆರಳಿದ್ದ ಮುಸ್ಲಿಮ್ ವಿದ್ವಾಂಸರನ್ನು ಪಾಣಿಸಾಗರ ಪೊಲೀಸ್ ಠಾಣೆಯ ಅಧಿಕಾರಿಗಳು ಐಪಿಸಿ ಸೆಕ್ಷನ್ 153ಎ, ಬಿ, 503, 504 ಅಡಿಯಲ್ಲಿ ಬಂಧಿಸಿದ್ದಾರೆ.

ಮಾತ್ರವಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಮತ್ತು ನಕಲಿ ಪೋಸ್ಟ್ ಗಳನ್ನು ಹಾಕಿದ ನೆಪದಲ್ಲಿ ನೂರಾರು ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ದಾಳಿಯ ನೆಪದಲ್ಲಿ ಒಂದು ವಾರ ಕಾಲ ನಡೆದ ಉದ್ವಿಗ್ನತೆಯ ಸಂದರ್ಭದಲ್ಲಿ ಮುಸ್ಲಿಮ್ ಮಹಿಳೆಯರ ಮೇಲೆಯೂ ದೌರ್ಜನ್ಯ, ಲೈಂಗಿಕ ಕಿರುಕುಳ ನಡೆದ ಬಗ್ಗೆ ವರದಿಯಾಗಿದೆ.
ಮುಸ್ಲಿಂ ಮಹಿಳೆಯರಿಗೆ ತೀವ್ರ ಹಿಂದುತ್ವವಾದಿ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಲೈಂಗಿಕ ದೌರ್ಜನ್ಯ ನಡೆಸಿದ್ದು, ಮುಸ್ಲಿಮರು ಪೊಲೀಸರಿಗೆ ದೂರು ನೀಡಿದ್ದಾರೆ. ಪಾಣಿಸಾಗರ್ ನ ವಿಎಚ್‌ ಪಿ ಜಾಥಾದಲ್ಲಿ ರೋಬಝಾರ್ ಪ್ರದೇಶದ ಮುಸ್ಲಿಂ ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ನಂತರ ಮಹಿಳೆಯರ ಮೇಲೆಯೂ ದಾಳಿ ನಡೆಸಲಾಗಿದೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಉಲ್ಲೇಖಿಸಲಾಗಿದೆ.


ಸರ್ಕಾರಿ ಯಂತ್ರ ನಿಷ್ಕ್ರಿಯವಾದಾಗ ತ್ರಿಪುರಾದ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿರುವುದು ಆಶಾವಾದದ ಬೆಳವಣಿಗೆಯಾಗಿದೆ. ಭಾವನೆ ಕೆರಳಿಸಲು ಅಥವಾ ಉತ್ತೇಜನವನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ಬಳಿಕ ಅಲ್ಲಿನ ರಾಜ್ಯ ಸರ್ಕಾರ ಸ್ವಲ್ಪಮಟ್ಟಿಗೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮುಂದಾಯಿತು ಎಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಜನರ ಜೀವನ, ಜೀವನೋಪಾಯ ಮತ್ತು ಆಸ್ತಿಪಾಸ್ತಿಗಳನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಕರ್ತವ್ಯ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಳಿಕ ಸರ್ಕಾರ ಶಾಂತಿ ಕಾಪಾಡಲು ಮುಂದಾಯಿತು ಎಂದು ಸ್ವತಃ ಅಲ್ಲಿನ ನಿವಾಸಿಗಳೇ ಹೇಳುತ್ತಾರೆ.


ತ್ರಿಪುರಾ ದಾಳಿ ಪೂರ್ವ ನಿಯೋಜಿತ ಎಂಬುದಕ್ಕೆ ಈಗಾಗಲೇ ಹಲವು ಸಾಕ್ಷ್ಯಗಳು ದೊರಕಿವೆ. ಬಲಪಂಥೀಯ ಯೂಟ್ಯೂಬರ್ ಸುರೇಶ್ ರಜಪೂತ್ ಎಂಬಾತ ತನ್ನ ಫೇಸ್‌ ಬುಕ್ ಖಾತೆಯಲ್ಲಿ, ನಿಜವಾದ ದೀಪಾವಳಿಯನ್ನು ತ್ರಿಪುರಾದಲ್ಲಿ ಆಚರಿಸಲಾಗಿದೆ. ದೀಪಾವಳಿ ಎಂದರೆ ಇದೇ. ತ್ರಿಪುರಾದಂತೆ ಎಲ್ಲಾ ಹಿಂದೂಗಳು ಎಚ್ಚೆತ್ತುಕೊಂಡರೆ, ನಿಮ್ಮ ಭವಿಷ್ಯ ಏನಾಗಬಹುದು ಊಹಿಸಿ ಎಂದು ತ್ರಿಪುರಾದಲ್ಲಿ ನಡೆದ ಮುಸ್ಲಿಮರ ಮೇಲಿನ ದೌರ್ಜನ್ಯದ ಕುರಿತಾಗಿ ಬರೆದುಕೊಂಡಿದ್ದಾನೆ. ಇಂತಹ ಮನಸ್ಥಿತಿಯನ್ನು ಸಂಘಪರಿವಾರ ನಿರಂತರವಾಗಿ ಸೃಷ್ಟಿಸುತ್ತಾ ಬಂದಿದೆ. ದೇಶದ ಹಲವು ಭಾಗಗಳಲ್ಲಿ ಇಂತಹ ಹೇಳಿಕೆಗಳು, ಘೋಷಣೆಗಳು ಮೊಳಗುತ್ತಲೇ ಇವೆ. ಆದರೆ ಅವುಗಳನ್ನು ನಿಯಂತ್ರಿಸಬೇಕಾದವರು ಮೌನವಾಗಿರುವುದು ಇಂತಹ ಶಕ್ತಿಗಳಿಗೆ ಉತ್ತೇಜನ ನೀಡಿದಂತಾಗಿದೆ. ಕಾನೂನು ಮೌನವಾಗಿರುವವರೆಗೆ ಇಂತಹ ಹೇಳಿಕೆಗಳು, ಘೋಷಣೆಗಳು ಮೊಳಗುತ್ತಲೇ ಇರುತ್ತವೆ. ಇಂತಹ ಮೌನಗಳ ವಿರುದ್ಧ ಪ್ರಜಾಪ್ರಭುತ್ವವಾದಿಗಳು ಧ್ವನಿ ಎತ್ತಲೇಬೇಕಾಗಿದೆ.



Join Whatsapp