ತ್ರಿಪುರಾ: ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ಮಂಟಪವನ್ನು ಧ್ವಂಸಗೊಳಿಸಿದ್ದನ್ನು ವಿರೋಧಿಸಿ ತ್ರಿಪುರಾದ ಪಾಣಿಸಾಗರ್ ನಲ್ಲಿ ವಿಎಚ್ ಪಿ ಮತ್ತು ಬಜರಂಗದಳ ಮೆರವಣಿಗೆ ನಡೆಸಿದ್ದು, ಈ ವೇಳೆ ಚಮ್ಟಿಲ್ಲಾ ಪ್ರದೇಶದ ಮಸೀದಿ ಧ್ವಂಸಗೊಳಿಸಿ, ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ.
ಪಾಣಿಸಾಗರದಲ್ಲಿ ವಿಎಚ್ ಪಿ ಆಯೋಜಿಸಿದ್ದ ಪ್ರತಿಭಟನೆಯನ್ನು 3,500ಕ್ಕೂ ಹೆಚ್ಚು ಜನರು ಸೇರಿದ್ದರು. ವಿಎಚ್ಪಿ ಕಾರ್ಯಕರ್ತರ ಒಂದು ಗುಂಪು ಚಮ್ಟಿಲ್ಲಾ ಪ್ರದೇಶದಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದೆ. ನಂತರ, ಅಲ್ಲಿಂದ ಸುಮಾರು 800 ಗಜಗಳಷ್ಟು ದೂರದಲ್ಲಿರುವ ರೋವಾ ಬಜಾರ್ ಪ್ರದೇಶದಲ್ಲಿರುವ ಮುಸ್ಲಿಮರಿಗೆ ಸೇರಿದ ಮೂರು ಮನೆಗಳು ಮತ್ತು ಮೂರು ಅಂಗಡಿಗಳನ್ನು ಧ್ವಂಸಗೊಳಿಸಿದೆ.
ಇದೇ ರಸ್ತೆಯಲ್ಲಿದ್ದ ಎರಡು ಅಂಗಡಿಗಳಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ಇದುವರೆಗೆ ಕೇವಲ ಒಂದು ಎಫ್ಐಆರ್ ದಾಖಲಿಸಲಾಗಿದೆ.