ಮಾಜಿ ಸಂಸದ ಅತೀಕ್ ಅಹ್ಮದ್ ಸಮಾಧಿ ಮೇಲೆ ತ್ರಿವರ್ಣ ಧ್ವಜ: ಕಾಂಗ್ರೆಸ್ ನಾಯಕನ ಬಂಧನ

Prasthutha|

ಲಕ್ನೋ: ಪ್ರಯಾಗ್ ರಾಜ್ ಹಳೆಯ ನಗರ ಪ್ರದೇಶದಲ್ಲಿರುವ ಕಸರಿಮಸರಿ ಪ್ರದೇಶದ ಖಬರಸ್ತಾನದಲ್ಲಿರುವ ಮಾಜಿ ಸಂಸದ ಅತೀಕ್ ಅಹ್ಮದ್ ಸಮಾಧಿಯ ಮೇಲೆ ಸ್ಥಳೀಯ ಕಾಂಗ್ರೆಸ್ ನಾಯಕ ರಾಜ್ ಕುಮಾರ್ ಸಿಂಗ್ ರಜ್ಜು ಅವರು ತ್ರಿವರ್ಣ ಧ್ವಜವನ್ನು ನೆಟ್ಟಿದ್ದು. ಇದು ವಿವಾದವಾಗುತ್ತಲೇ ಕಾಂಗ್ರೆಸ್ ರಾಜ್ ಕುಮಾರ್ ಅವರನ್ನು ಪಕ್ಷದಿಂದ ಹೊರ ಹಾಕಿದೆ.

- Advertisement -


ಇಲ್ಲಿನ 43ನೇ ವಾರ್ಡ್ ನ ಕಾರ್ಪೊರೇಟರ್ ಆಗಿರುವ ರಜ್ಜು ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಜ್ಜು ಮಾಜಿ ಸಂಸದ ಎಂಬ ನೆಲೆಯಲ್ಲಿ ಸಮಾಧಿ ಮೇಲೆ ತ್ರಿವರ್ಣ ಧ್ವಜ ಊರಿದ ವೀಡಿಯೋ ವೈರಲ್ ಆಗುತ್ತಲೇ ದೂಮನ್ ಗಂಜ್ ಪೊಲೀಸರು ರಜ್ಜು ಅವರನ್ನು ಬಂಧಿಸಿದ್ದಾರೆ.


ಏಪ್ರಿಲ್ 15ರ ರಾತ್ರಿ ಪೊಲೀಸರ ಜೊತೆಗಿರುವಾಗಲೇ ಅತೀಕ್ ಮತ್ತವರ ಸಹೋದರ ಅಶ್ರಫ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಏಪ್ರಿಲ್ 16ರ ಸಂಜೆ ಅವರ ಅಂತ್ಯಸಂಸ್ಕಾರ ನೆರವೇರಿತ್ತು. ವೈರಲ್ ಆದ ವೀಡಿಯೋದಲ್ಲಿ ರಾಜ್ ಕುಮಾರ್ ಸಿಂಗ್ ರಜ್ಜು ಅವರು ಅತೀಕ್ ಅಹ್ಮದ್ ಅವರನ್ನು ಆತ್ಮಾರ್ಪಣೆ ಗೈದ ವ್ಯಕ್ತಿ ಎಂದು ಹೇಳಿರುವುದಲ್ಲದೆ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂದು ಹೇಳಿ ಆಮೇಲೆ ತ್ರಿವರ್ಣ ಬಾವುಟವನ್ನು ಗೋರಿಗೆ ಊರಿದ್ದಾರೆ. ವೀಡಿಯೋದ ಸಾಚಾತನ ಇನ್ನಷ್ಟೆ ಸಾಬೀತಾಗಬೇಕಾಗಿದೆ.

- Advertisement -


ವೀಡಯೋ ವೈರಲ್ ಆಗುತ್ತಲೇ ದೂಮನ್ ಗಂಜ್ ಪೊಲೀಸರು ಅದರ ಹಿಂದೆ ಬಿದ್ದು, ಬುಧವಾರ ರಾತ್ರಿ ರಜ್ಜು ಅವರನ್ನು ಬಂಧಿಸಿದ್ದಾರೆ. ರಜ್ಜು ಅವರ ವಿರುದ್ಧ ಒಂದು ದೂರು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಯಾಗ್ ರಾಜ್ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಅವರು ಕೂಡಲೆ ರಜ್ಜು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಹೊರ ಹಾಕಿ ಅವರ ವೈಯಕ್ತಿಕ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.


“ರಾಜ್ಯ ಸರಕಾರವು ಅತೀಕ್ ಅಹ್ಮದ್ ಅವರ ಕೊಲೆ ಆಗುವಂತೆ ಮಾಡಿದೆ. ನಾನು ಅತೀಕ್ ಗೆ ಭಾರತ ರತ್ನ ನೀಡಲು ಒತ್ತಾಯಿಸುತ್ತೇನೆ. ಅತೀಕ್ ಸಾರ್ವಜನಿಕರ ಪ್ರತಿನಿಧಿ, ಅವರಿಗೆ ಬಲಿದಾನವಾದ ಸ್ಥಾನಮಾನ ನೀಡಬೇಕು. ದಿವಂಗತ ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮಭೂಷಣ ಕೊಡಬಹುದಾದರೆ, ಅತೀಕ್ ಅಹ್ಮದ್ ರಿಗೆ ಯಾಕೆ ಭಾರತ ರತ್ನ ನೀಡಬಾರದು? ಅಂತ್ಯಸಂಸ್ಕಾರ ಕಾಲದಲ್ಲಿ ರಾಜ ಮರ್ಯಾದೆ ಏಕೆ ನೀಡಿಲ್ಲ?” ಎಂದು ರಜ್ಜು ಅವರು ಪ್ರಶ್ನಿಸಿದ್ದಾರೆ.


Join Whatsapp