ಡಿ.30ರಂದು ಭಾರತ್ ಬಂದ್‌‌ಗೆ ಕರೆ ನೀಡಿದ ಬುಡಕಟ್ಟು ಸಂಘಟನೆ ಎಎಸ್‌ಎ

Prasthutha|

ನವದೆಹಲಿ: ತಮ್ಮ ‘ಸರ್ನಾ’ ಧರ್ಮಕ್ಕೆ ಮಾನ್ಯತೆ ನೀಡಬೇಕೆಂಬ ದೀರ್ಘ ಕಾಲದ ಬೇಡಿಕೆ ಈಡೇರಿಸಲು ಆಗ್ರಹಿಸಿ ಡಿಸೆಂಬರ್ 30ರಂದು ಸಾಂಕೇತಿಕ ‘ಭಾರತ್ ಬಂದ್‌’ಗೆ ಬುಡಕಟ್ಟು ಸಂಘಟನೆ ಆದಿವಾಸಿ ಸೆಂಗಲ್ ಅಭಿಯಾನ್ (ಎಎಸ್‌ಎ) ಕರೆ ನೀಡಿದೆ.

- Advertisement -

ಸರ್ನಾ ಧರ್ಮ ಸಂಹಿತೆಯು ದೇಶದ 15 ಕೋಟಿ ಬುಡಕಟ್ಟು ಜನಾಂಗದವರ ಗುರುತಾಗಿದೆ. ಬುಡಕಟ್ಟು ಸಮುದಾಯದ ಧರ್ಮಕ್ಕೆ ಮಾನ್ಯತೆ ನಿರಾಕರಿಸುವುದು ಸಾಂವಿಧಾನಿಕ ಅಪರಾಧಕ್ಕೆ ಸಮಾನ ಎಂದು ಎಎಸ್‌ಎ ಅಧ್ಯಕ್ಷ ಸಲ್ಖಾನ್ ಮುರ್ಮು ಹೇಳಿದ್ದಾರೆ.

- Advertisement -

ಬುಡಕಟ್ಟು ಸಮುದಾಯವನ್ನು ಇತರ ಧರ್ಮಗಳನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸುವುದು ಸರಿಯಲ್ಲ. ಇದು ಧರ್ಮದ ಗುಲಾಮಗಿರಿಯನ್ನು ಸ್ವೀಕರಿಸಲು ಒತ್ತಾಯಿಸಿದಂತೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಬುಡಕಟ್ಟು ಜನಾಂಗದವರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2011ರ ಜನಗಣತಿಯ ಪ್ರಕಾರ, ಸುಮಾರು 50 ಲಕ್ಷ ಆದಿವಾಸಿಗಳು ತಮ್ಮ ನಂಬಿಕೆಯನ್ನು ‘ಸರ್ನಾ’ ಎಂದು ಹೇಳಿಕೊಂಡಿದ್ದಾರೆ. ಜೈನ ಧರ್ಮಕ್ಕೆ ಹೋಲಿಸಿದರೆ ನಮ್ಮ ಸಂಖ್ಯೆ ದೊಡ್ಡದಿದೆ. ಕೇವಲ 44 ಜನ ಸಂಖ್ಯೆ ಇರುವ ಜೈನರಿಗೆ ಪ್ರತ್ಯೇಖ ಧರ್ಮದ ಮಾನ್ಯತೆ ಕೊಟ್ಟಿರುವಾಗ ನಮಗೂ ಕೊಡಿ ಎಂದು ಮುರ್ಮು ಆಗ್ರಹಿಸಿದ್ದಾರೆ.

1951ರ ಜನಗಣತಿಯು ಸರ್ನಾ ಧರ್ಮಕ್ಕೆ ಪ್ರತ್ಯೇಕ ಕೋಡ್ ಕೊಟ್ಟಿತ್ತಾದರೂ ನಂತರ ಕಾಂಗ್ರೆಸ್ ಅದನ್ನು ತೆಗೆದು ಹಾಕಿದೆ. ಬಿಜೆಪಿ ಈಗ ಆದಿವಾಸಿಗಳನ್ನು ವನವಾಸಿಗಳು ಮತ್ತು ಹಿಂದೂಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಮುರ್ಮು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಎಸ್‌ಎ ಬುಡಕಟ್ಟು ಸಮುದಾಯದ ಹಿತಾಸಕ್ತಿ ಕಾಪಾಡುವವರ ಪರವಾಗಿದೆ. ಯಾವ ಪಕ್ಷ ಸರ್ನಾ ಧರ್ಮವನ್ನು ಗುರುತಿಸುತ್ತದೆಯೋ, ಆ ಪಕ್ಷಕ್ಕೆ ನಾವು ಮತ ಹಾಕುತ್ತೇವೆ ಎಂದು ಮುರ್ಮು ಹೇಳಿದ್ದಾರೆ.

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜನ್ಮ ಸ್ಥಳವಾದ ಜಾರ್ಖಂಡ್‌ನ ಉಲಿಹಾತುಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಥವಾ ನವೆಂಬರ್‌ನಲ್ಲಿ ಒಡಿಶಾದ ಬರಿಪಾದಕ್ಕೆ ಭೇಟಿ ನೀಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಸರ್ನಾ ಧರ್ಮದ ಮಾನ್ಯತೆಯ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಎಎಸ್‌ಎಗೆ ಬೇರೆ ಆಯ್ಕೆಗಳಿಲ್ಲದ ಕಾರಣ, ಡಿಸೆಂಬರ್ 30 ರಂದು ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ಒಂದು ದಿನದ ಸಾಂಕೇತಿಕ ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಮುರ್ಮು ಹೇಳಿದ್ದಾರೆ.

Join Whatsapp