ಮಂಗಳೂರು | ರೈಲ್ವೆ ಹಳಿಗೆ ಬಿದ್ದ ಮರ: ವೃದ್ಧೆಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Prasthutha|

ಮಂಗಳೂರು: ರೈಲ್ವೆ ಹಳಿಗೆ ಮರ ಬಿದ್ದಿರುವುದನ್ನು ಕಂಡ ವೃದ್ಧೆಯೊಬ್ಬರು ಸಂಭಾವ್ಯ ಅನಾಹುತ ತಪ್ಪಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

- Advertisement -


ರೈಲು ಅವಘಡ ತಪ್ಪಿಸಲು ಕೈಯಲ್ಲಿ ಕೆಂಪು ವಸ್ತ್ರ ಹಿಡಿದು ರೈಲಿನ ಮುಂದೆ ವೃದ್ಧೆ ಸಾಹಸ ತೋರಿದ್ದಾರೆ. ನಗರದ ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ಈ ಘಟನೆ ನಡೆದಿದೆ. ರೈಲು ಹಳಿಗೆ ಮರ ಬಿದ್ದಿರುವುದನ್ನು 70 ವರ್ಷ ವಯಸ್ಸಿನ ಚಂದ್ರಾವತಿ ಗಮನಿಸಿದ್ದರು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಸಂಚರಿಸುವುದರಲ್ಲಿತ್ತು. ಇದನ್ನು ಗಮನಿಸಿದ ಚಂದ್ರಾವತಿ ಅವರು ತಕ್ಷಣ ಮನೆಗೆ ಓಡೋಡಿ ಹೋಗಿ ಕೆಂಪು ಬಟ್ಟೆಯೊಂದನ್ನು ತಂದು ರೈಲು ಹಳಿಯ ಬದಿ ನಿಂತು ಪ್ರದರ್ಶಿಸಿದ್ದಾರೆ. ಇದನ್ನು ಗಮನಿಸಿದ ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ.


ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿನ ಬಳಿಕ ಮರವನ್ನು ತೆರವು ಮಾಡಿದ್ದಾರೆ. ವೃದ್ದೆ ಚಂದ್ರಾವತಿ ಅವರ ಸಮಯೋಚಿತ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.



Join Whatsapp