ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಬಂದರ್ ವಾರ್ಡ್ ನಲ್ಲಿ ಹಲವು ದಿನಗಳಿಂದ ಸ್ಥಳೀಯ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಬದಿಯಲ್ಲಿ ಕಸ ರಾಶಿ ಬಿದ್ದಿದ್ದು, ಕಸ ವಿಲೇವಾರಿ ವಾಹನದ ಸಹಕಾರದಿಂದ ಸಾರ್ವಜನಿಕರು ಅದನ್ನು ಸ್ವಚ್ಛಗೊಳಿಸಿದರು.
ಬಂದರ್ ಪರಿಸರದಲ್ಲಿ ಕಸ ರಾಶಿ ಬಿದ್ದಿದ್ದು, ಮಳೆ ಬಂದ ಬಳಿಕ ಸುತ್ತಮುತ್ತ ಸ್ಥಳಗಳಿಗೂ ಹರಡಿದೆ. ಈ ಮಧ್ಯೆ ಬೀಡಾಡಿ ದನಗಳು, ನಾಯಿಗಳು ಕಸವನ್ನು ಚೆಲ್ಲಾಪಿಲ್ಲಿ ಮಾಡಿದ್ದರಿಂದ ಸ್ಥಳದಲ್ಲಿ ದುರ್ವಾಸನೆ ಬರುತ್ತಿತ್ತು. ಈ ಬಗ್ಗೆ ಹಲವು ದಿನಗಳಿಂದ ಸಾರ್ವಜನಿಕರು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುತ್ತಿದ್ದು, ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಇದರಿಂದ ಬೇಸತ್ತ ಬಂದರ್ ವಾರ್ಡಿನ ಯುವಕರು, ಪ್ರತಿಭಟನಾ ಭಾಗವಾಗಿ ಸ್ವಯಂ ಕಾರ್ಯಾಚರಣೆಗೆ ಇಳಿದಿದ್ದು, ಆದಿತ್ಯವಾರ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಬಂದರ್ ಪರಿಸರದ ಈ ಸ್ವಚ್ಛತಾ ಕಾರ್ಯವನ್ನು ಮಾಡಿದ ಯುವಕರು ಈ ಸ್ವಚ್ಛತೆಯನ್ನು ಮುಂದುವರಿಸಲು ತೀರ್ಮಾನಿಸಿದ್ದು, ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಕಸ ಹಾಕಿದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದೆಂದು ಯುವಕರು ತಿಳಿಸಿದ್ದಾರೆ. ಅದೇ ರೀತಿ ನೈರ್ಮಲ್ಯದ ದೃಷ್ಟಿಯಿಂದ ಯಾರು ಕೂಡ ಕಸವನ್ನು ಎಲ್ಲೆಂದರಲ್ಲಿ ಹಾಕಬಾರದು, ಸ್ವಚ್ಛತೆಯನ್ನು ಕಾಪಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.