ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ತೃತೀಯಲಿಂಗಿಯೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದ ಸಿ.ಆಂಜಿನಮ್ಮ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಗ್ರಾಮಸ್ಥರು ಕಣಕ್ಕಿಳಿಸಿದ್ದರು. ಪರಿಶಿಷ್ಟ ವರ್ಗದ ಅಭ್ಯರ್ಥಿಗೆ ಮೀಸಲಾದ ಸ್ಥಾನದಲ್ಲಿ ಆಂಜಿನಮ್ಮ ಪ್ರತಿನಿಧಿಸಿದ್ದಾರೆ. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿಯ 19 ಸದಸ್ಯರು ಸರ್ವಾನುಮತದಿಂದ ನಿರ್ಣಯಿಸಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಒಟ್ಟು ಮೂವರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದರು, ಆದರೆ ಹಿರಿಯರು ಮತ್ತು ಗ್ರಾಮಸ್ಥರ ಒತ್ತಾಯಕ್ಕೆ ಹಾಗೂ ಅವರಿಗೂ ಒಂದು ಅವಕಾಶ ನೀಡಬೇಕು ಎಂದು ನಿರ್ಧರಿಸಿ, ಸಿ.ಆಂಜಿನಮ್ಮ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಏಳು ಗ್ರಾಮಗಳು ಒಳಗೊಂಡಿದೆ.
ಈ ಬಗ್ಗೆ ಮಾತನಾಡಿದ ಆಂಜಿನಮ್ಮ, ತನ್ನ ಗೆಲುವಿನ ಶ್ರೇಯಸು ಗ್ರಾಮಸ್ಥರಿಗೆ ಸಲ್ಲುತ್ತದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿರಲಿಲ್ಲ. ಆದರೆ ಗ್ರಾಮದ ಹಿರಿಯರು ನನ್ನನ್ನು ಸ್ಪರ್ಧಿಸುವಂತೆ ಕೇಳಿದರು, ಇದೀಗ ನನಗೆ ದೊಡ್ಡ ಪಟ್ಟವನ್ನೇ ನೀಡಿದ್ದಾರೆ. ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಕಾಮಗಾರಿಗಳನ್ನು ತರಲು ಶ್ರಮಿಸುತ್ತೇನೆ ಎಂದರು.