ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡ್ರೋನ್‌ ಬಳಕೆ : ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ನಗರವಾಗಿಸಲು ಸೂಚನೆ

Prasthutha|

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ಮುಂದೆ ಡ್ರೋನ್ ಕ್ಯಾಮರಾಗಳು ಸಹಕರಿಸಲಿವೆ. ಪೊಲೀಸರು ಮೊದಲ ಬಾರಿಗೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ನಗರದ ಟ್ರಾಫಿಕ್ ಅನ್ನು ನಿಯಂತ್ರಿಸಲಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ಹಾಗೂ ಸಂಚಾರ ವಿಭಾಗದ ಪೊಲೀಸರಿಗೆ ಮೂರು ತಿಂಗಳಲ್ಲಿ ಬೆಂಗಳೂರನ್ನು ಸಂಚಾರ ಸಮಸ್ಯೆ ಮುಕ್ತವಾಗಿಸುವ ಗುರಿ ನೀಡಿದ್ದಾರೆ.

- Advertisement -

ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಹಿರಿಯ ಅಧಿಕಾರಿಗಳ ಜೊತೆ ತಮ್ಮ ಮೊದಲ ಅಪರಾಧ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ನಾನು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಮೂರು ತಿಂಗಳ ಗಡುವನ್ನು ನೀಡಿದ್ದೇನೆ. ನಗರವು ವಿಶ್ವದ ಅತ್ಯಂತ ಜನದಟ್ಟಣೆಯ ನಗರಗಳಲ್ಲಿ ಒಂದಾಗಿದೆ ಎಂಬ ಅಪಖ್ಯಾತಿ ಗಳಿಸಿದೆ. ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾದರೆ ನಿಖರ ಕಾರಣ ಪತ್ತೆಗೆ ಪೊಲೀಸರಿಗೆ ಆಡಚಣೆಯಾಗುತ್ತಿದೆ. ಹೀಗಾಗಿ ವಾಹನ ದಟ್ಟಣೆ ತಗ್ಗಿಸಲು ಇನ್ಮುಂದೆ ಡ್ರೋನ್‌ ಕ್ಯಾಮರಾಗಳನ್ನು ಬಳಸಿ ಸಂಚಾರ ನಿರ್ವಹಣೆ ಮಾಡಲಾಗುತ್ತದೆ. ವಾಹನಗಳ ಓಡಾಟಕ್ಕೆ ಅಡ್ಡಿಯಾದರೆ ಕೂಡಲೇ ಡ್ರೋನ್‌ ಬಳಸಿ ಯಾವ ಜಾಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ ಎಂಬುದನ್ನು ಪತ್ತೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಪೊಲೀಸ್‌ ನಿಯಂತ್ರಣ ಕೊಠಡಿಗೆ ಈ ಡ್ರೋನ್‌ ಕ್ಯಾಮರಾಗಳು ಸಂಪರ್ಕ ಹೊಂದಿರುತ್ತವೆ. ಸಂಚಾರ ದಟ್ಟಣೆ ಉಂಟಾದ ಸ್ಥಳದಿಂದಲೇ ಇನ್‌ಸ್ಪೆಕ್ಟರ್‌ಗಳ ವಾಹನದಲ್ಲಿ ಆ ಕ್ಯಾಮರಾಗಳನ್ನು ನಿರ್ವಹಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಇನ್ನು ಪ್ರತಿ ದಿನ ಪಿಕ್‌ ಅವರ್‌ಗಳಲ್ಲಿ ಅಂದರೆ ಬೆಳಗ್ಗೆ ಹಾಗೂ ಸಂಜೆ ವೇಳೆ ಎರಡು ಗಂಟೆಗಳು ಸಂಚಾರ ವಿಭಾಗದ ಎಲ್ಲ ಪೊಲೀಸರು ರಸ್ತೆಯಲ್ಲಿ ನಿಂತು ಸಂಚಾರ ನಿರ್ವಹಣೆ ಮಾಡಬೇಕು. ಸಂಚಾರ ದಟ್ಟಣೆ ಉಂಟಾದರೆ ಡಿಸಿಪಿ ಹಾಗೂ ಎಸಿಪಿ ಅವರನ್ನು ಸಹ ಹೊಣೆ ಮಾಡಲಾಗುತ್ತದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.

- Advertisement -

ಇದೇ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಅವರು, ”ನಾಲ್ಕು ಸಂಚಾರ ವಿಭಾಗದ ಡಿಸಿಪಿಗಳಿಗೆ ನಾಲ್ಕು ಡ್ರೋನ್ ಕ್ಯಾಮೆರಾಗಳನ್ನು ಖರೀದಿಸಿದ್ದು, ಮುಂದಿನ ಒಂದು ವಾರ ಅಥವಾ 10 ದಿನಗಳಲ್ಲಿ ಕ್ಯಾಮೆರಾಗಳನ್ನು ಪಡೆಯಲಾಗುವುದು. ತರಬೇತಿ ನಡೆಯುತ್ತಿದೆ, 10 ಸಂಚಾರ ಉಪವಿಭಾಗಗಳ ಎಲ್ಲಾ ಎಸಿಪಿಗಳು ಮತ್ತು ಸಂಚಾರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಂತ ಹಂತವಾಗಿ ಡ್ರೋನ್‌ಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಹೊಯ್ಸಳ ಪೊಲೀಸರಿಗೆ ಬಾಡಿ ಕ್ಯಾಮ್

ಇನ್ನು ಹೊಯ್ಸಳ ಸಿಬ್ಬಂದಿಗೆ ಇನ್ಮುಂದೆ ಬಾಡಿ ಕ್ಯಾಮರಾ ಅಳವಡಿಕೆ ಮಾಡಿ ಅವರ ಪ್ರತೀ ಸಂಭಾಷಣೆ, ಜನರ ಸಂಭಾಷಣೆ ರೆಕಾರ್ಡ್ ಆಗುತ್ತೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ನಗರದಾದ್ಯಂತ ಹೈ ರೆಸಲ್ಯೂಷನ್ ಸಿಸಿಟಿವಿ ಕ್ಯಾಮರ ಅಳವಡಿಕೆ

ನಗರದಲ್ಲಿ ಮಹಿಳೆಯರ ಭದ್ರತೆ ಬಗ್ಗೆ ಹೆಚ್ಚು ಗಮನ ಹರಿಸೋಕೆ ಸಚಿವರು ಸೂಚನೆ ನೀಡಿದ್ದಾರೆ. ನಿರ್ಭಯ ಕೇಸ್ ಆದ್ಮೇಲೆ ಹೆಣ್ಣುಮಕ್ಕಳ ಸೇಫ್ಟಿಗೆ ಸೇಫ್ ಸಿಟಿ ಪ್ರಾಜೆಕ್ಟ್ ಮಾಡಲಾಗಿದೆ. ಅದರ ಅಂಗವಾಗಿ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶ ಹಾಗೂ ಮಹಿಳೆಯರು ಹೆಚ್ಚು ಓಡಾಡೋ ಕಡೆ ಹೈಯೆಂಡ್ ಕ್ಯಾಮರಾ ಅಳವಡಿಕೆಗೆ ಸೂಚನೆ ನೀಡಿದ್ದಾರೆ. ಈಗಾಗಲೇ 7000ಕ್ಕೂ ಹೆಚ್ಚು ಕ್ಯಾಮರಾ ಅಳವಡಿಕೆಗೆ ಯೋಜನೆ ಮಾಡಿಕೊಂಡಿದ್ದು, ಕಮಾಂಡ್ ಸೆಂಟರ್ ಮೂಲಕ ಮಹಿಳೆಯರು ಓಡಾಡೋ ಜಾಗಗಳು, ಸೇಫ್ಟಿ ಐಲೆಂಡ್ ಮೂಲಕ ಬರೋ ಮಾಹಿತಿಗಳ ಬಗ್ಗೆ ಗಮನ ಹರಿಸಲು ಸೂಚಿಸಿದ್ದೇನೆ.‌ ಈಗಾಗಲೇ ಸೇಫ್‌ ಸಿಟಿ ಪ್ರಾಜೆಕ್ಟ್ 70% ಮುಗಿದಿದ್ದು ಉಳಿದ ಕೆಲಸಗಳು ನಡೆಯುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

Join Whatsapp