ಪಂಜಾಬ್ ನಲ್ಲಿ ಮೋದಿಗೆ ಟ್ರಾಫಿಕ್ ತಡೆ ವಿವಾದ: ನ್ಯಾಯಾಂಗ ತನಿಖೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ, ನಾಳೆ ವಿಚಾರಣೆ

Prasthutha|

- Advertisement -

ನವದೆಹಲಿ: ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಫ್ಲೈಓವರ್ ಮೇಲೆ ಸುಮಾರು 20 ನಿಮಿಷಗಳ ಕಾಲ ಸಿಲುಕಿದ ಘಟನೆಯಲ್ಲಿ ಭದ್ರತಾ ಲೋಪ ಉಂಟಾಗಿದೆ. ಇದರ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಹಿರಿಯ ವಕೀಲ ಮನಿಂದರ್ ಸಿಂಗ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

ಗುರುವಾರ ಈ ಸಂಬಂಧ ಅವರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.ಪಂಜಾಬ್ ನಲ್ಲಿ ಉಂಟಾದ ಭದ್ರತಾ ಲೋಪ ವಿಷಯವನ್ನು ಸಿಜೆಐ ಮುಂದೆ ಮನಿಂದರ್ ಸಿಂಗ್ ಪ್ರಸ್ತಾಪಿಸಿದರು. ಈ ಸಂಬಂಧ ಸಲ್ಲಿಸಲಾದ ರಿಟ್ ಅರ್ಜಿಯನ್ನು ತುರ್ತಾಗಿ ತೆಗೆದುಕೊಳ್ಳುವಂತೆ ನ್ಯಾಯಾಲಯವನ್ನು ವಿನಂತಿಸಿದರು.ಆಗ ಮುಖ್ಯ ನ್ಯಾಯಮೂರ್ತಿ ಈ ವಿಷಯವನ್ನು ನಾಳೆ ವಿಚಾರಣೆಗೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಪಂಜಾಬ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದರು.

- Advertisement -

ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್ ನ ಫಿರೋಜ್ ಪುರದಲ್ಲಿ ನಿಗದಿಯಾಗಿದ್ದ ಪಕ್ಷದ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ರೈತರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಮುಂದೆ ಸಾಗಲಾರದೆ ಪ್ರಧಾನಿ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ದೆಹಲಿಗೆ ಮರಳಿದ್ದರು. ಇದು ಭದ್ರತಾ ಲೋಪ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಪಂಜಾಬ್ ಸರ್ಕಾರ, ಇಲ್ಲಿ ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ. ಪ್ರಧಾನಿಯ ಪ್ರಯಾಣ ಹೆಲಿಕಾಪ್ಟರ್ ನಲ್ಲಿ ನಿಗದಿಯಾಗಿತ್ತು. ಆದರೆ ಅವರು ರಸ್ತೆ ಮೂಲಕ ಪ್ರಯಾಣಿಸಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಮಾತ್ರವಲ್ಲ ಕಾರ್ಯಕ್ರಮದಲ್ಲಿ ಹೆಚ್ಚಿನ ಜನ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ಪ್ರಧಾನಿ ಕಾರ್ಯಕ್ರಮ ರದ್ದುಪಡಿಸಿದ್ದಾರೆಯೇ ಹೊರತು ಭದ್ರತಾ ಲೋಪದಿಂದ ಅಲ್ಲ ಎಂದು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಪ್ರತಿಕ್ರಿಯಿಸಿದ್ದಾರೆ.

Join Whatsapp