ಕಾಪು ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅನುಮತಿ ನೀಡುವಂತೆ ವ್ಯಾಪಾರಿಗಳ ಒಕ್ಕೂಟ ಆಗ್ರಹ

Prasthutha|

ಉಡುಪಿ: ಕಾಪು ಮಾರಿಗುಡಿ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಸ್ಥರ ವ್ಯಾಪಾರಕ್ಕೆ ಅನುಮತಿ ನೀಡುವಂತೆ ಉಡುಪಿ ವ್ಯಾಪಾರಿಗಳ ಒಕ್ಕೂಟ ಆಗ್ರಹಿಸಿದೆ. ಕರಾವಳಿ ಉತ್ಸವ, ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ ಹೇರದೆ ವ್ಯಾಪಾರಕ್ಕೆ ಅನುವು ಮಾಡಿಕೊಡುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರೀಫ್‌ ಒತ್ತಾಯಿಸಿದ್ದಾರೆ.

- Advertisement -

ಇಂದು ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೀಫ್‌, ಮುಸ್ಲಿಮರು ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದಶಕಗಳಿಂದಲೂ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚೆಗೆ ಹಿಂದೂಗಳ ಕಾರ್ಯಕ್ರಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗುತ್ತಿದೆ ಎಂದರು.

ಹಿಜಾಬ್ ಪ್ರಕರಣದ ತೀರ್ಪಿಗೆ ಸಂಬಂಧಿಸಿ ಮುಸ್ಲಿಮರು ಬಂದ್ ನಡೆಸಿ ವ್ಯಾಪಾರಗಳನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಿದ್ದರು. ಇದೇ ನೆಪವೊಡ್ಡಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ನಾವು ಬೀದಿ ಬದಿ ವ್ಯಾಪಾರಿಗಳಾಗಿದ್ದು ಬಂದ್ ದಿನ ನಾವು ಬೆಂಬಲಿಸಿಯೇ ಇಲ್ಲ, ಅದರೂ ನಮ್ಮ ವ್ಯಾಪಾರಕ್ಕೆ ತಡೆಹಿಡಿಯಲಾಗಿದೆ ಎಂದು ಹೇಳಿದರು.

- Advertisement -

ನಾಳೆಯಿಂದ ಪ್ರಾರಂಭಗೊಳ್ಳುವ ಕಾಪು ಮಾರಿಗುಡಿ ಜಾತ್ರೆಯಲ್ಲಿ ಹಲವು ವರ್ಷಗಳಿಂದ ವ್ಯಾಪಾರ ನಡೆಸುತ್ತಿದ್ದ ಮುಸ್ಲಿಮರ ವ್ಯಾಪಾರವನ್ನು ನಿಷೇಧಿಸಲಾಗಿದೆ. ನಮಗೆ ಹಿಂದಿನಂತೆಯೇ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ಮಹಮ್ಮದ್ ಆರೀಫ್‌ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಇಬ್ರಾಹಿಂ ತೌಫಿಕ್‌, ಹಮೀದ್ ನೇಜಾರು, ಶಾಹಿದ್ ನೇಜಾರು, ಯಾಸಿನ್ ಕೆಮ್ಮಣ್ಣು ಉಪಸ್ಥಿತರಿದ್ದರು.



Join Whatsapp