ಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿ ಸಿಟಿ ಬಸ್ ಸ್ಥಳಾಂತರಿಸಿದ ಕ್ರಮ ಕಾನೂನುಬಾಹಿರ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಹಾಗೂ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ನ ಮಾಜಿ ಸದಸ್ಯ ಐವನ್ ಡಿಸೋಜಾ, 450 ಕುಟುಂಬಗಳು ನಗರದ ಹಳೆ ಸಿಟಿ ಬಸ್ ನಿಲ್ದಾಣಗಳಲ್ಲಿ ಅಂಗಡಿಯನ್ನು ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದರು. ನಗರದ ಸ್ಟೇಟ್ ಬ್ಯಾಂಕ್ ಸರ್ಕಲ್ ನಿಂದ ಸಿಟಿ ಬಸ್ಸುಗಳನ್ನು ಸರ್ವಿಸ್ ಬಸ್ಸು ನಿಲ್ದಾಣಕ್ಕೆ ಸ್ಥಳಾಂತರಿಸುವ ಮೂಲಕ ನಗರ ಪಾಲಿಕೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಇಂತಹ ಕ್ರಮ ಕಾನೂನುಬಾಹಿರ ಹಾಗೂ ಏಕಪಕ್ಷೀಯ ನಿರ್ಧಾರ, ಬಸ್ಸು ಮಾಲಕರ ಲಾಬಿಗೆ ಮಣಿದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಸಿಟಿ ಬಸ್ಸು, ಎಕ್ಸ್ಪ್ರೆಸ್ ಹಾಗೂ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಗಳಿಗೆ ಒಂದೇ ನಿಲ್ದಾಣದಲ್ಲಿ ಸ್ಥಳಾವಕಾಶ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.
ಬಸ್ಸು ನಿಲ್ದಾಣದ ಸ್ಥಳಾಂತರದಿಂದ ಇಲ್ಲಿನ ಅಂಗಡಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು ಎನ್ನುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಕಮಿಷನರ್’ಗೆ ಪೊಲೀಸರ ಮೂಲಕ ಮನವಿ ಸಲ್ಲಿಸಲಾಯಿತು.