ಬೆಂಗಳೂರು: ಹಬ್ಬ ಹರಿದಿನಗಳು ಸೇರಿ ಇತರೆ ದಿನಗಳಲ್ಲೂ ಹಿಂದೂ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯವನ್ನು ಗೌರವಿಸುವ, ಪ್ರೀತಿಸುವ ಹಾಗೂ ಉಳಿಸಿ ಬೆಳೆಸುವ ಜನರೊಂದಿಗೆ ವ್ಯಾಪಾರ, ವ್ಯವಹಾರ ಮಾಡಬೇಕೆಂದು ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಯತ್ನಾಳ್, ‘ನಮ್ಮ ಹಿಂದೂ ಧರ್ಮ, ನಮ್ಮ ದೇಶದ ಒಂದು ಜೀವನದ ಪದ್ದತಿ, ಸಂಸ್ಕೃತಿಯಾಗಿದೆ. ದೇಶದ ಸುರಕ್ಷತೆ, ಅಭಿವೃದ್ಧಿ ಜೊತೆಗೆ ಧರ್ಮದ ಉಳಿವಿಗಾಗಿ, ನಮ್ಮ ಧರ್ಮವನ್ನು ಗೌರವಿಸುವ, ದೇಶಾಭಿಮಾನ ಹೊಂದಿರುವ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಸ್ಥರಿಂದ ಹಿಡಿದು, ದೊಡ್ಡ ವ್ಯಾಪಾರಸ್ಥರ ಹತ್ತಿರ ದಿನಸಿ, ಬಟ್ಟೆ, ಹಣ್ಣು, ತರಕಾರಿ ಯಾವುದೇ ಸಾಮಾಗ್ರಿಗಳನ್ನು ಖರೀದಿಸಬೇಕು. ಇದರಿಂದ ನಮ್ಮ ಧರ್ಮಕ್ಕೆ ಗೌರವ ಮತ್ತು ಕೊಡುಗೆ ನೀಡಿದಂತಾಗುತ್ತದೆ ಎಂದಿದ್ದಾರೆ.
ಆದರೆ, ಧರ್ಮ ವಿರೋಧಿ, ದೇಶ ವಿರೋಧಿಗಳ ಹತ್ತಿರ ವ್ಯವಹಾರ ಮಾಡಿದರೆ, ನಮ್ಮ ಧರ್ಮಾಚರಣೆಗೆ ಬಳಸುವ ಶುದ್ಧ ವಸ್ತುಗಳು ಸಿಗದೇ, ಅಶುದ್ಧತೆಯ ವಸ್ತುಗಳನ್ನು ಆಚರಣೆಗೆ ಬಳಸಿದಂತಾಗಿ, ನಮ್ಮ ಆಚರಣೆಗಳ ಪವಿತ್ರತೆಯು ಹಾಳಾಗಿ, ಪರಿಶುದ್ಧತೆಯಿಂದ ವಂಚಿತರಾಗುತ್ತೇವೆ. ನಾವು ನಮ್ಮ ಹಿಂದುಸ್ಥಾನವನ್ನು, ಈಗ ಹಿಂದುಗಳ ಮೇಲೆ ಅನ್ಯಾಯ, ದೌರ್ಜನ್ಯವಾಗುತ್ತಿರುವ ಬಾಂಗ್ಲಾ ದೇಶದಂತಾಗಲು ಬಿಡಬಾರದು. ಆದ್ದರಿಂದ ನಮ್ಮ ಹಿಂದೂ ಧರ್ಮವನ್ನು ಉಳಿಸಿ, ಬೆಳೆಸಲು ಯಾವುದೇ ಚೌಕಾಸಿ ಮಾಡದೇ, ನಮ್ಮ ಧರ್ಮವನ್ನು ಗೌರವಿಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರವೇ ವ್ಯವಹರಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ನಮ್ಮ ಧರ್ಮವನ್ನು ಆಚರಿಸುವ ಮೂಲಕ ಧರ್ಮವನ್ನು ಗೌರವಿಸುವ, ಉಳಿಸಿ, ಬೆಳೆಸುವ ನಮ್ಮ ಬಡ ವ್ಯಾಪಾರಿಗಳ ಹತ್ತಿರ ವ್ಯಾಪಾರ ಮಾಡುವುದರಿಂದ ಅವರ ಜೀವನೋಪಾಯಕ್ಕೆ ಮತ್ತು ನಮ್ಮ ಹಿಂದೂ ಧರ್ಮಕ್ಕೆ ಪರೋಕ್ಷವಾಗಿ ಬೆಂಬಲ ಸಹಾಯ, ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ನಮ್ಮ ದೇಶ, ನಮ್ಮ ಧರ್ಮವನ್ನು ಉಳಿಸಿ-ಬೆಳೆಸುವ, ಪ್ರೀತಿಸುವ, ಗೌರವಿಸುವ ಜನರೊಂದಿಗೆ ಮಾತ್ರ ವ್ಯವಹರಿಸಲು, ನಾವೆಲ್ಲ ನಮ್ಮ ಸಣ್ಣ-ಪುಟ್ಟ, ಜಾತಿ-ಭೇಧವನ್ನು ಮರೆತು ಮುಂದಿನ ನಮ್ಮ ಮಕ್ಕಳ, ನಮ್ಮ ಪೀಳಿಗೆಯ ಭವಿಷ್ಯಕ್ಕಾಗಿ ನಾವೆಲ್ಲ ಹಿಂದೂಗಳು ಎಂಬ ಭಾವನೆಯೊಂದಿಗೆ ನಮ್ಮ ಸಹೋದರ-ಸಹೋದರಿಯರನ್ನು ಪ್ರೋತ್ಸಾಹಿಸಿ, ಬೆಳೆಸಲು ಹೊಸ ಹೆಜ್ಜೆಯನ್ನು ಇಡಬೇಕೆಂದು ಕರೆ ನೀಡಿದ್ದಾರೆ.