ಬೆಳಗಾವಿ: ಬಿಸಿಲಿನಿಂದ ಬಸವಳಿದಿದ್ದ ಬೆಳಗಾವಿ ಜನತೆಗೆ ಮಳೆ ತಂಪೆರೆದಿದ್ದರೂ, ಭಾರಿಯಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಮಧ್ಯಾಹ್ನ 4 ಗಂಟೆ ನಂತರ ನಗರದಲ್ಲಿ ಆರಂಭವಾದ ಬಿರುಗಾಳಿ ಸಹಿತ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಸುಮಾರು ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಮಳೆ ಸುರಿದಿದೆ. ಜೋರಾಗಿ ಬೀಸಿದ ಬಿರುಗಾಳಿಯಿಂದ ಗಿಡದ ಟೊಂಗೆಗಳು ಮುರಿದು ಬಿದ್ದಿವೆ. ಗುಡುಗು-ಸಿಡಿಲು ಸಹಿತ ಮಳೆಯಾಗಿದೆ.
ನಗರದ ಹಲವು ರಸ್ತೆಗಳು ಹೊಳೆಯಂತೆ ಆಗಿದ್ದು,ಅನೇಕ ಕಡೆಗಳಲ್ಲಿ ಸಣ್ಣ ಪುಟ್ಟ ಗಿಡಗಳು ಧರೆಗುರುಳಿವೆ. ಗಾಳಿಯಿಂದ ಕೆಲವು ಕಡೆಗೆ ಮನೆಗಳ ಮೇಲಿನ ಪತ್ರೆಗಳು ಹಾರಿ ಹೋಗಿವೆ. ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ಅಂಗಡಿ-ಮಳಿಗೆಗಳಲ್ಲೂ ನೀರು ನುಗ್ಗಿವೆ.
ಪ್ರತಿ ಸಲ ಮಳೆಯಾದಾಗ ಭೇಂಡಿ ಬಜಾರ್, ಪಾಂಗುಳ ಗಲ್ಲಿಯಲ್ಲಿ ಗಟಾರು ನೀರೆಲ್ಲ ರಸ್ತೆ ಮೇಲೆ ಹರಿದು ಬರುವುದು ಸಾಮಾನ್ಯವಾಗಿದೆ. ಇಂದು ಸುರಿದ ಧಾರಾಕಾರ ಮಳೆಯಿಂದ ಕೂಡ ಗಟಾರು ನೀರೆಲ್ಲ ರಸ್ತೆ ಮೇಲೆ ಹೊಳೆಯಂತೆ ಹರಿದಿದೆ.
ಹುಬ್ಬಳ್ಳಿಯಲ್ಲಿಯೂ ಭರ್ಜರಿ ಮಳೆ
ಹುಬ್ಬಳ್ಳಿ ನಗರದಲ್ಲಿ ಸುರಿದ ಬಾರಿ ಗುಡುಗು-ಸಿಡಿಲು ಮಿಶ್ರಿತ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ, ಜೊತೆಗೆ ನಗರದ ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ನಾಲಾಗಳು ತುಂಬಿಕೊಂಡು ರಸ್ತೆಯ ಮೇಲೆಲ್ಲಾ ನೀರು ಹರಿದಿದೆ.
ನಗರದಲ್ಲಿ ಸುರಿದ ರಭಸದ ಮಳೆಗೆ ಹಲವು ಕಡೆ ಗಿಡ-ಮರಗಳು ನೆಲಕ್ಕುರುಳಿದ್ದು, ರಸ್ತೆಯ ಮೇಲೆಲ್ಲಾ ನೀರು ನಿಲ್ಲುವ ಮೂಲಕ ಸಂಪೂರ್ಣ ಜಲಾವೃತಗೊಂಡಿರುವುದು ಕಂಡು ಬಂದಿದೆ.
ನಗರದ ದಾಜೀಬಾನ ಪೇಟೆ, ತುಳಜಾಭವಾನಿ ವೃತ್ತದಿಂದ ಕಮರಿಪೇಟೆ, ದಿವಟೆಗಲ್ಲಿ, ಮಹಾವೀರಗಲ್ಲಿ, ಕೋಯಿನ್ ರಸ್ತೆ, ಕೊಪ್ಪಿಕರ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಸ್ಟೇಶನ್ ರಸ್ತೆ, ವಿದ್ಯಾನಗರ, ಉಣಕಲ್ಲ ಕ್ರಾಸ್, ಕಿತ್ತೂರ ಚೆನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣದ ಮುಂಭಾಗ, ಹಳೇಹುಬ್ಬಳ್ಳಿ ಗಣೇಶ ನಗರ, ಆನಂದ ನಗರ ತಗ್ಗು ಪ್ರದೇಶ, ಪಡದಯ್ಯನ ಹಕ್ಕಲು, ನೇಕಾರನಗರ, ಜಂಗ್ಲಿಪೇಟೆ, ಸಿದ್ದಾರೂಢಸ್ವಾಮಿ ಮಠದ ಹಿಂಭಾಗ, ಸಿಮ್ಲಾ ನಗರ ಮುಖ್ಯ ರಸ್ತೆ, ಗದಗ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಅಪಾರ ಪ್ರಮಾಣ ನೀರು ನಿಂತಿರುವುದು ಕಂಡು ಬಂದಿದೆ.
ದೇಶಪಾಂಡೆ ನಗರದ ದೊಡ್ಡ ನಾಲಾ ತುಂಬಿ ಹರಿದಿದ್ದು, ನಾಲಾ ತುಂಬಿ ಸುಮಾರು 2-3 ಅಡಿ ನೀರು ಹೊರ ಬಂದಿರುವುದು ಕಂಡು ಬಂದಿತು. ಇದರಿಂದ ಅಕ್ಕಪಕ್ಕದ ಬಡಾವಣೆಗಳಲ್ಲಿ ಸಹ ನೀರು ನುಗ್ಗಿದೆ. ಒಂದು ಸ್ಥಳದಲ್ಲಿ ಮರದಡಿಗೆ ನಿಂತ ಕಾರಿನ ಮೇಲೆ ಮರ ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ದಕ್ಷಿಣ ಕನ್ನಡದ ಕಡಬದಲ್ಲಿ ಸಿಡಿಲು ಬಡಿದು ಓರ್ವ ಕಾರ್ಮಿಕ ಮೃತ
ದಕ್ಷಿಣ ಕನ್ನಡದ ಕಡಬದಲ್ಲಿ ಸಿಡಿಲು ಬಡಿದು ಓರ್ವ ಕಾರ್ಮಿಕ ಮೃತಪಟ್ಟಿದ್ದರೆ, ಮತ್ತಿಬ್ಬರು ಗಾಯಗೊಂಡಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಈ ಘಟನೆ ನಡೆದಿದೆ. ನದಿ ಬದಿಯ ಶೆಡ್‌ನಲ್ಲಿ ಕಾರ್ಮಿಕರು ಮರಳುಗಾರಿಕೆ ಮಾಡುತ್ತಿದ್ದರು. ಈ ವೇಳೆ ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಸಾವನ್ನಪ್ಪಿದ್ದಾರೆ. ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಲ್ಲಿ ಸಿಡಿಲು ಬಡಿದು ರೈತ ಸ್ಥಳದಲ್ಲೇ ಸಾವು
ಸಿಡಿಲು ಬಡಿದು ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಐ ಕುಷ್ಟಗಿ ತಾಲೂಕಿನ ಹಿರೇಮುಕರ್ತಿನಾಳ ಬಳಿ ನಡೆದಿದೆ. ಕನಕರಾಯಪ್ಪ ಕಾಟಾಪುರ (28) ಮೃತ ರೈತ. ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.